ಚಿತ್ರದುರ್ಗ : ವೇತನ ಹೆಚ್ಚಳಕ್ಕಾಗಿ ಬಿಸಿಯೂಟ ನೌಕರರು ಜಿಲ್ಲಾ ಪಂಚಾಯಿತಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಅಕ್ಷರ ದಾಸೋಹ ಅಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿ, ಪ್ರಧಾನಿಗೆ ಮನವಿ ಸಲ್ಲಿಸಿದರು.
ರಾಜ್ಯಾದ್ಯಂತ ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ವೇಳೆ ಬಿಸಿಯೂಟ ತಯಾರಿಸಿ ಬಡಿಸುತ್ತಿರುವ ಮಹಿಳೆಯರು ಕಳೆದ 24 ವರ್ಷಗಳಿಂದಲೂ ಜೀವನ ಭದ್ರತೆಯಿಲ್ಲದೆ ಕೆಲಸ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಗೌರವ ಧನ ಹೆಚ್ಚಿಸಿಲ್ಲ. ಮಾಸಿಕ 26 ಸಾವಿರ ರೂ.ಗಳನ್ನು ನೀಡುವಂತೆ ಅನೇಕ ವರ್ಷಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದೇವೆ. ಗೌರವಧನ ಹೆಚ್ಚಿಸುವತನಕ ಕೇರಳ, ಪಾಂಡಿಚೇರಿ, ತಮಿಳುನಾಡು ಹರಿಯಾಣ ರಾಜ್ಯಗಳಲ್ಲಿ ಏಳರಿಂದ ಹನ್ನೆರಡು ಸಾವಿರ ರೂ. ವೇತನ ನೀಡುತ್ತಿರುವ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಕೊಡಬೇಕೆಂದು ಪ್ರತಿಭಟನಾನಿರತ ಮಹಿಳೆಯರು ಒತ್ತಾಯಿಸಿದರು.
ಹಣಕಾಸು ಇಲಾಖೆ ಒಪ್ಪಿಕೊಂಡಿರುವಂತೆ ನಿವೃತ್ತಿಯಾದವರಿಗೆ ಇಡಿಗಂಟು ಕೂಡಲೆ ನೀಡಬೇಕು. ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ಕೆಲಸಗಾರರಿಂದ ಎಸ್.ಡಿ.ಎಂ.ಸಿ.ಗೆ ವರ್ಗಾವಣೆ ಮಾಡಿರುವುದನ್ನು ಹಿಂದಕ್ಕೆ ತೆಗೆದುಕೊಂಡು ಸಾದಿಲ್ವಾರು ಖಾತೆಯನ್ನು ಮೊದಲಿನಂತೆ ಮುಂದುವರೆಸಬೇಕು.
ಅಡುಗೆ ಕೇಂದ್ರಗಳು ಸುಸಜ್ಜಿತವಾಗಿಲ್ಲದ ಕಡೆ ಸ್ವಚ್ಚತೆಯನ್ನು ಕಾಪಾಡಬೇಕು. ಉತ್ತರ ಪ್ರದೇಶ, ಪಂಜಾಬ್ ರಾಜ್ಯಗಳ ಹೈಕೋರ್ಟ್ ತೀರ್ಪಿನಂತೆ ವರ್ಷದ ಹನ್ನೆರಡು ತಿಂಗಳು ಕೆಲಸ ಮತ್ತು ಕನಿಷ್ಟ ವೇತನ ನೀಡಬೇಕು. ಎ.ಡಿ.ಎಂ.ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ತೆರೆಯಬೇಕು. ಪ್ರತಿ ಜಿಲ್ಲೆಯಲ್ಲಿ ಕ್ಲಸ್ಟರ್ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕು. ಕೆಲಸದ ಅವಧಿಯನ್ನು ನಾಲ್ಕು ಗಂಟೆಯಿಂದ ಆರು ಗಂಟೆಗೆ ಹೆಚ್ಚಿಸಿ ಅಕ್ಷರ ದಾಸೋಹ ಕೈಪಿಡಿಯಲ್ಲಿ ನಮೂದಿಸಬೇಕು. ಅಕ್ಷರ ದಾಸೋಹ ಯೋಜನೆಯನ್ನು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ನಡೆಸಬೇಕು. ಕೆಲಸ ಮಾಡುವಾಗ ಅಕಸ್ಮಾತ್ ಮರಣ ಹೊಂದಿದರೆ 25 ಲಕ್ಷ ರೂ.ಗಳ ಪರಿಹಾರ ಕೊಡಬೇಕು.
2023 ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಮಾಸಿಕ ಆರು ಸಾವಿರ ರೂ.ಗಳ ಗೌರವ ಧನ ಹೆಚ್ಚಿಸಬೇಕೆಂದು ಅಕ್ಷರದಾಸೋಹ ಮಹಿಳೆಯರು ಆಗ್ರಹಿಸಿದರು.
ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಎನ್.ನಿಂಗಮ್ಮ, ಸಿ.ಐ.ಟಿ.ಯು.ಜಿಲ್ಲಾ ಸಂಚಾಲಕ ಡಿ.ಎಂ.ಮಲಿಯಪ್ಪ, ಸಹ ಸಂಚಾಲಕ ಸಿ.ಕೆ.ಗೌಸ್ಪೀರ್,
ಟಿ.ರಾಜಮ್ಮ, ಮಂಜಮ್ಮ, ಶಿವಮ್ಮ, ಗೌರಮ್ಮ, ಪಾರ್ವತಮ್ಮ, ತಿಪ್ಪೇಸ್ವಾಮಿ ಸೇರಿದಂತೆ ಅಕ್ಷರದಾಸೋಹದ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.