ಬೆಳಗಾವಿ : ಅಕ್ರಮ ಬಾಂಗ್ಲಾ ವಲಸಿಗರು ಕರ್ನಾಟಕಕ್ಕೆ ಹಾಗೂ ದೇಶಕ್ಕೆ ಅಪಾಯಕರವಾಗಿದ್ದು, ಅವರನ್ನು ಗುರುತಿಸಿ ಗಡಿಪಾರು ಮಾಡಲು ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬಿಜೆಪಿ ಸದಸ್ಯ ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಾವಿರಾರು ಅಕ್ರಮ ವಲಸಿಗರು ಭಾರತಕ್ಕೆ ಆಗಮಿಸುಸುತ್ತಿದ್ದಾರೆ ಮತ್ತು ದೇಶದ ವಿವಿಧ ಭಾಗಗಳಿಗೆ ತೆರಳುತ್ತಾರೆ. ಅಕ್ರಮ ಬಾಂಗ್ಲಾ ವಲಸಿಗರನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ರಕ್ಷಣಾ ಸಿಬ್ಬಂದಿ ಶ್ರಮ ವಹಿಸುತ್ತಿದ್ದಾರೆ. ಅದರ ಹೊರತಾಗಿಯೂ, ಅವರು ಭಾರತವನ್ನು ಪ್ರವೇಶಿಸುತ್ತಾರೆ. ಅವರನ್ನು ಗುರುತಿಸಲು ವಿಶೇಷ ಕಾರ್ಯಪಡೆ ರಚಿಸಿದ್ದೇವೆ ಎಂದರು.
ಪ್ರತಿ ವರ್ಷ ಸಾವಿರಾರು ಜನರನ್ನು ಗಡೀಪಾರು ಮಾಡಲಾಗುತ್ತಿದೆ. ಇಲ್ಲಿಯವರೆಗೆ, ಅಕ್ರಮವಾಗಿ ನೆಲೆಸಿದ್ದ 159 ಬಾಂಗ್ಲಾದೇಶಿ ಪ್ರಜೆಗಳು ಮತ್ತು 24 ಪಾಕಿಸ್ತಾನೀಯರನ್ನು ಬಂಧಿಸಲಾಗಿದೆ. ಬಾಂಗ್ಲಾದೇಶದ 115 ಜನರು ನಕಲಿ ದಾಖಲೆಗಳೊಂದಿಗೆ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಹೇಳಿದರು.
ಬಾಂಗ್ಲಾದೇಶಿ ಪ್ರಜೆಗಳನ್ನು ಗುರುತಿಸಿ ಗಡಿಪಾರು ಮಾಡಲು ವಿಶೇಷ ಪಡೆ ರಚಿಸಲಾಗಿದೆ. ಬಾಂಗ್ಲಾದೇಶಿ ವಲಸಿಗರು ಮಾತ್ರವಲ್ಲ, ಅಧ್ಯಯನಕ್ಕೆ ಬರುವ ಕೆಲವು ಆಫ್ರಿಕನ್ನರು ಸಹ ಅದೇ ರೀತಿ ನಾಪತ್ತೆಯಾಗಿದ್ದಾರೆ ಎಂದಿದ್ದಾರೆ.