ಬೆಳಗಾವಿ : ಮಾಜಿ ಸಚಿವರೂ ಆದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಭಯೋತ್ಪಾದಕರಂತೆ ನಡೆಸಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಥ ಘಟನೆ ರಾಜ್ಯ ಮಾತ್ರವಲ್ಲ, ಇಡೀ ದೇಶದಲ್ಲಿ ಆಗಿರಲು ಸಾಧ್ಯವಿಲ್ಲ. ನಾಲ್ಕೈದು ಪೊಲೀಸ್ ಠಾಣೆಗೆ ಕರೆದೊಯ್ದು ಅಲ್ಲಿ ಕೂರಿಸಿದ್ದಾರೆ. ವಿಪಕ್ಷ ನಾಯಕರು, ವಕೀಲರನ್ನೂ ಒಳಕ್ಕೆ ಬಿಟ್ಟಿಲ್ಲ ಎಂದು ಖಂಡಿಸಿದರು.
ಸಿ.ಟಿ.ರವಿ ಅವರ ದೂರನ್ನೂ ರಿಜಿಸ್ಟರ್ ಮಾಡಿಲ್ಲ. ನಮ್ಮೆಲ್ಲ ಕಾರ್ಯಕರ್ತರು ರಾತ್ರಿ ಪೊಲೀಸ್ ಠಾಣೆ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಸಿ.ಟಿ.ರವಿ ಅವರಿಗೆ ತಲೆಗೆ ಪೆಟ್ಟು ಬಿದ್ದಿದೆ. ಆಸ್ಪತ್ರೆಗೂ ಕರೆದುಕೊಂಡು ಹೋಗಿಲ್ಲ. ಸರ್ಕಾರದ ಕುಮ್ಮಕ್ಕಿನಿಂದ ಅತಿರೇಕದ ವರ್ತನೆ ತೋರಿದ್ದಾರೆ. ಸಿ.ಟಿ.ರವಿ ಅವರ ಹೇಳಿಕೆ ಕುರಿತು ಸಭಾಪತಿಯವರ ರೂಲಿಂಗ್ ಅನ್ನೂ ಗಮನಿಸಬೇಕಿದೆ ಎಂದರು.
ಸಿ.ಟಿ.ರವಿ ಅವರ ಹೇಳಿಕೆ ಕುರಿತು ಸಭಾಪತಿಯವರ ರೂಲಿಂಗ್ ಅನ್ನೂ ಗಮನಿಸಬೇಕಿದೆ. ತದನಂತರ ಸುವರ್ಣಸೌಧಕ್ಕೆ ನುಗ್ಗಿ ಗೂಂಡಾವರ್ತನೆ ಮಾಡಿದ್ದು, ಬಳಿಕ ಸಿ.ಟಿ.ರವಿ ಅವರನ್ನು ಹೊತ್ತಾಕಿಕೊಂಡು ಹೋಗಿದ್ದಾರೆ. ಸಿ.ಟಿ.ರವಿ ಅವರು ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರಿದ್ದು, ಅವರೊಬ್ಬ ಸಾಮಾನ್ಯ ವ್ಯಕ್ತಿ ಅಲ್ಲ. ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರು ಎಂದು ತಿಳಿಸಿದರು.
ನಿನ್ನೆ ಪೊಲೀಸ್ ಠಾಣೆಗೆ ಹೊತ್ತಾಕಿಕೊಂಡು ಹೋಗಿ ಗದಗ, ರಾಮದುರ್ಗ ಸೇರಿ ಬೇರೆಬೇರೆ ಕಡೆ ಅಲೆದಾಡಿಸಿ ಒಂದು ರೀತಿ ಟೆರರಿಸ್ಟ್ ಅಂದುಕೊಳ್ಳುವಂತೆ ಮಾಡಿದ್ದಾರೆ. ಟೆರರಿಸ್ಟ್ ಅನ್ನು ಪೊಲೀಸರು ಕರೆದೊಯ್ದಿದ್ದಾರೆಂಬ ಭಾವನೆ ಬರುತ್ತಿದೆ. ಸರಕಾರದ ಕುಮ್ಮಕ್ಕಿನಿಂದ ಆ ರೀತಿ ವರ್ತನೆ ನಡೆದಿದೆ ಎಂದು ಕಿಡಿಕಾರಿದರು.
ಸಿ.ಟಿ.ರವಿ ಅವರನ್ನು ಸುಮಾರು 450 ಕಿಮೀನಿಂದ 500 ಕಿಮೀ ಸುತ್ತಾಡಿಸಿದ್ದಾರೆ. ಇವರೇನು ಮಾಡಲು ಹೊರಟಿದ್ದಾರೆ? ಒಬ್ಬ ಜನಪ್ರತಿನಿಧಿಯನ್ನು ನಡೆಸಿಕೊಳ್ಳುವ ರೀತಿಯೇ ಇದು? ಪೊಲೀಸರ ಮೇಲೆ ಒತ್ತಾಯ, ಒತ್ತಡ ಹೇರಿ ದೌರ್ಜನ್ಯ ನಡೆಸುತ್ತಿದ್ದು, ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇವತ್ತು ಪ್ರತಿಭಟನೆ ಆಯೋಜಿಸಿದ್ದೇವೆ ಎಂದು ಹೇಳಿದರು.