ನವದೆಹಲಿ: ಭಾರತದ ವಿರುದ್ಧ ಯಾವಾಗ್ಲೂ ಕುತಂತ್ರಿ ಚೀನಾ ಕತ್ತಿಮಸಿಯುತ್ತಲೇ ಇರುತ್ತೆ. ಸುಮ್ಮನೆ ಇರಲಾರದೇ ಗಡಿಯಲ್ಲಿ ಭಾರತವನ್ನು ಕೆಣಕುತ್ತೆ. ಇತ್ತೀಚೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಚೀನಾ ವಿದೇಶಾಂಗ ಸಚಿವ ವಾಂಗ್ ಯಿಯನ್ನ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದರು.ಆದರೆ, ಭೂತಾನ್ ಭಾಗ ಎನ್ನಲಾಗುವ ಪ್ರದೇಶದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಚೀನಾ 22 ಗ್ರಾಮಗಳನ್ನು ನಿರ್ಮಾಣ ಮಾಡಿದೆ. ಉಪಗ್ರಹ ಚಿತ್ರಗಳನ್ನು ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ. ಭಾರತದ ಸಿಕ್ಕಿಂ ಸಮೀಪ ಈ ಗ್ರಾಮಗಳ ನಿರ್ಮಾಣವಾಗಿದ್ದು, ಕಳವಳ ವ್ಯಕ್ತವಾಗಿದೆ.
ಚೀನಾದ ಸೇನಾಪಡೆಗಳಿಗೆ ಸುಲಭ ಸಂಚಾರ
ಡೋಕ್ಲಾಂನಲ್ಲಿ ಗ್ರಾಮ ನಿರ್ಮಾಣವಾಗುತ್ತಿರುವುದರಿಂದ ಈ ಪ್ರಸ್ಥಭೂಮಿಯ ಅತ್ಯಂತ ದಕ್ಷಿಣಕ್ಕೆ ಚೀನಾದ ಸೇನಾಪಡೆಗಳು ಸಂಚಾರ ಮಾಡಲು ಅವಕಾಶ ದೊರೆಯುತ್ತದೆ. ಇದು ಭಾರತಕ್ಕೆ ತೀರ ಸಮೀಪವಾಗಿದ್ದು, ಇದು ಚೀನಾದ ಮಿಲಿಟರಿ ನೆಲೆಗಳಿಗೂ ಸಮೀಪದಲ್ಲಿದೆ.
ಡೋಕ್ಲಾಂ ಬಿಕ್ಕಟ್ಟು
2017ರಲ್ಲಿ ಡೋಕ್ಲಾಂನ ಈ ಪ್ರದೇಶವು ಭಾರತ ಮತ್ತು ಚೀನಾದ ಸೈನಿಕರ ನಡುವೆ 73 ದಿನಗಳ ಕಾಲದ ಬಿಕ್ಕಟ್ಟಿನ ಪ್ರದೇಶವಾಗಿತ್ತು. ಹೀಗಾಗಿ ಈ ಪ್ರಸ್ಥಭೂಮಿಯ ದಕ್ಷಿಣಕ್ಕೆ ಚೀನಾದ ಸೇನೆಗಳು ತಲುಪುವ ರಸ್ತೆ ಮಾರ್ಗಗಳ ನಿರ್ಮಾಣವನ್ನು ತಡೆಯಲು ಭಾರತ ಸರಕಾರ ಮಧ್ಯಪ್ರವೇಶಿಸಿತ್ತು.
ಇದೀಗ ಮತ್ತೆ ಡೋಕ್ಲಾಂನಲ್ಲಿ ಗ್ರಾಮಗಳ ನಿರ್ಮಾಣ ವೇಗ ಪಡೆಯುತ್ತಿದ್ದು ಉಪಗ್ರಹ ಚಿತ್ರಗಳು ಭಾರತದ ಆತಂಕಕ್ಕೆ ಕಾರಣವಾಗಿದೆ.