ಲಕ್ನೋ : ನಿಷೇಧಿತ ಸಂಘಟನೆ ಖಲಿಸ್ತಾನ್ ಕಮಾಂಡೋ ಫೋರ್ಸ್‌ನ ಮೂವರು ಭಯೋತ್ಪಾದಕರನ್ನು ಸೋಮವಾರ ಮುಂಜಾನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎನ್‌ಕೌಂಟರ್‌ನಲ್ಲಿ ಹತರಾದ ಖಲಿಸ್ತಾನಿ ಭಯೋತ್ಪಾದಕರನ್ನು ಗುರ್ವಿಂದರ್ ಸಿಂಗ್ (25), ವೀರೇಂದ್ರ ಸಿಂಗ್ ಅಲಿಯಾಸ್ ರವಿ (23), ಮತ್ತು ಜಸ್ಪ್ರೀತ್ ಸಿಂಗ್ ಅಲಿಯಾಸ್ ಪ್ರತಾಪ್ ಸಿಂಗ್ (18) ಎಂದು ಗುರುತಿಸಲಾಗಿದೆ.
ಹತರು ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಪೊಲೀಸ್ ಪೋಸ್ಟ್ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಎನ್‌ಕೌಂಟರ್ ಬಳಿಕ ಪೊಲೀಸರು ಎರಡು ಎಕೆ-47 ರೈಫಲ್‌ಗಳು, ಎರಡು ಗ್ಲಾಕ್ ಪಿಸ್ತೂಲ್‌ಗಳು ಮತ್ತು ಹಲವು ಮ್ಯಾಕ್ಸಿನ್ ಜೀವಂತ ಗುಂಡುಗಳನ್ನು ಮೃತರಿಂದ ಸ್ವಾಧೀನಪಡಿಸಿಕೊಂಡಿದ್ದಾರೆ.
ಪಿಲಿಭಿತ್ ಜಿಲ್ಲೆಯ ಪುರನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಮೂವರು ಆರೋಪಿಗಳ ಇರುವಿಕೆಯ ಬಗ್ಗೆ ಪಂಜಾಬ್ ಪೊಲೀಸರ ತಂಡವು ಪಿಲಿಭಿತ್ ಪೊಲೀಸರಿಗೆ ಮಾಹಿತಿ ನೀಡಿದೆ. ಬಳಿಕ ಕಾರ್ಯಾಚರಣೆ ಪ್ರಾರಂಭಿಸಲಾಗಿದ್ದು, ಮೂವರು ವ್ಯಕ್ತಿಗಳು ಪುರನ್‌ಪುರದಲ್ಲಿ ಅನುಮಾನಾಸ್ಪದ ವಸ್ತುಗಳೊಂದಿಂಗೆ ಸಂಚರಿಸುವ ಬಗ್ಗೆ ಪೊಲೀಸರಿಗೆ ಸುಳಿವು ದೊರೆತಿದೆ.
ಆರೋಪಿಗಳ ಬಗ್ಗೆ ದೊರೆತ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಕಾರ್ಯಚರಣೆಗೆ ತೆರಳಿದಾಗ ಮೂವರು ಶಂಕಿತರು ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಪೊಲೀಸರು ನಡೆಸಿದ ದಾಳಿಯಲ್ಲಿ ಆ ಮೂವರು ಶಂಕಿತರು ಹತರಾಗಿದ್ದಾರೆ. ಪಂಜಾಬ್ ಪೊಲೀಸ್ ಮತ್ತು ಉತ್ತರ ಪ್ರದೇಶ ಪೊಲೀಸರ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ ಮೂವರು ಭಯೋತ್ಪಾದಕರನ್ನು ಎನ್‌ಕೌಂಟರ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.