ಬೆಳಗಾವಿ : ವಿಧಾನ ಪರಿಷತ್ ಕಲಾಪದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಶಬ್ದಗಳಿಂದ ಬಿಜೆಪಿ ನಾಯಕ ಸಿ.ಟಿ ರವಿ ನಿಂದಿಸಿದ ಆರೋಪ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಸಿ.ಟಿ ರವಿ ಪದ ಬಳಸಿದ್ದಾರೆ ಎನ್ನಲಾದ ವೀಡಿಯೋವೊಂದನ್ನ ಲಕ್ಷ್ಮಿ ಹೆಬ್ಬಾಳ್ಕರ್ ಬಿಡುಗಡೆ ಮಾಡಿದ್ದಾರೆ.
ಪರಿಷತ್ ಕಲಾಪದ ವೇಳೆ ಸಿ.ಟಿ ರವಿ ಆ ಪದ ಬಳಸಿ ನಿಂದಿಸಿದ್ದಾರೆ ಎನ್ನಲಾದ ವೀಡಿಯೋವನ್ನ ಪ್ರಸಾರ ಮಾಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಸಿ.ಟಿ ರವಿ ಕ್ಷಮಿಸುವ ಪ್ರಮೇಯ ಇಲ್ಲ, ಈ ಲಕ್ಷ್ಮಿ ಹೆಬ್ಬಾಳ್ಕರ್ ಯಾವತ್ತಿಗೂ ಕ್ಷಮಿಸಲ್ಲ. ಅವರಿಗೆ ಶಿಕ್ಷೆ ಆಗುವವರೆಗೂ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಸಿಎಂ ಮತ್ತು ಸಭಾಪತಿ ಅವರು ತನಿಖೆ ಮಾಡಬೇಕು. ಆದಷ್ಟು ಬೇಗೆ ಎಫ್ಎಸ್ಎಲ್ ರಿಪೋರ್ಟ್ ತರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.ಸಿಟಿ ರವಿಯವರೇ ನನಗೆ ಆ ಪದ ಬಳಸಿದೀರಿ, ಇಂತಹ ನೂರು ಸಿ.ಟಿ ರವಿ ಬಂದ್ರೂ ನಾನು ಎದುರಿಸುತ್ತೇನೆ. ನನ್ನ ಬಳಿ ದಾಖಲೆ ಇವೆ, ಇಂದೇ ಬಿಡುಗಡೆ ಮಾಡುತ್ತೇನೆ ಎಂದರು.
ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಲ್ವಾ, ದೇವರ ಹತ್ರ ಹೋಗಿ ನಿಂತ್ಕೊಳ್ತಿರಿ, ಒಬ್ಬ ಹೆಣ್ಮಗಳಿಗೆ ಈ ರೀತಿ ಮಾತನಾಡಿ, ರಾಜಾರೋಷವಾಗಿ ಓಡಾಡ್ತಿದ್ದೀರಿ ನಿಮಗೆ ನಾಚಿಗೆ ಆಗಬೇಕು. ಇದನ್ನು ಸುಮ್ಮನೆ ಬಿಡಲ್ಲ, ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ಪ್ರಧಾನಿ ಮೋದಿ, ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ. ಅವಕಾಶ ಸಿಕ್ಕರೆ ಪ್ರಧಾನಿ ಮೋದಿಯವರನ್ನ ಭೇಟಿ ಆಗಿ ವಿಷಯ ತಿಳಿಸುತ್ತೇನೆ. ರಾಜಕಾರಣದಲ್ಲಿ ಹಿಂದಕ್ಕೆ ಸರಿಸಬೇಕು ಅಂತಾ ಮಾಡಿದ್ದಾರೆ. ನಾವು ಇದರಿಂದ ಮನೆಯಲ್ಲಿ ಕುಳಿತುಕೊಳ್ತೇವಿ ನೊಂದುಕೊಳ್ತೇವಿ ಅಂತ ಅಂದುಕೊಂಡಿದ್ರೆ ಈಗಲೇ ಬಿಟ್ಟುಬಿಡಿ ಎಂದು ತಿರುಗೇಟು ನೀಡಿದ್ದಾರೆ.