ಭಟ್ಕಳ: ಮುರುಡೇಶ್ವರದ ಕಡಲ ತೀರದಲ್ಲಿ ಅವಘಡ ನಡೆದ ಕಾರಣ ಕಡಲತೀರ ಪ್ರವೇಶ ನಿಷೇಧಿಸಲಾಗಿದ್ದು, ನಿಷೇಧಕ್ಕೆ ಸಡಲಿಕೆ ನೀಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಅದಕ್ಕಿಂತ ಮುಖ್ಯವಾಗಿ ಕಡಲತೀರದಲ್ಲಿ `ಸಿಮ್ಮಿಂಗ್ ಝೋನ್’ ಎಂದು ಕೆಲ ಪ್ರದೇಶ ಗುರುತಿಸಿ ಅಲ್ಲಿ ಮಾತ್ರ ನೀರಿಗಿಳಿಯಲು ಅವಕಾಶ ಕಲ್ಪಿಸುವ ಬಗ್ಗೆ ನಿರ್ಧರಿಸಲಾಗಿದೆ.
ಈ ಕುರಿತು ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಮಾಹಿತಿ ನೀಡಿದ್ದಾರೆ. ಕಡಲತೀರದ ಉದ್ದಕ್ಕೂ ಭದ್ರತೆ ನೀಡಲು ಸಿಬ್ಬಂದಿ ಕೊರತೆಯಿರುವ ಕಾರಣ ಸೂಚಿಸಿದ ಸ್ಥಳದಲ್ಲಿ ಮಾತ್ರ ಪ್ರವಾಸಿಗರು ನೀರಿಗಿಳಿಯಬೇಕು. ಅಲ್ಲಿ ಭದ್ರತಾ ಸಿಬ್ಬಂದಿ ಇರಲಿದ್ದು, ಪ್ರವಾಸಿಗರ ಸುರಕ್ಷತೆ ಕಾಪಾಡಲಿದ್ದಾರೆ. ಇದರಿಂದ ಸಾವು-ನೋವಿನ ಪ್ರಮಾಣ ಕಡಿಮೆ ಮಾಡಲು ಸಾಧ್ಯ ಎಂಬ ಚಿಂತನೆ ಜಿಲ್ಲಾಡಳಿತದ ಮುಂದಿದೆ.
`ಈಜುಲು ತೆರಳುವ ಪ್ರದೇಶಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಇನ್ನಷ್ಟು ಲೈಫ್‌ಗಾರ್ಡ ಒದಗಿಸಲು ಈ ಹಿಂದೆ ಅನುದಾನ ಕೊರತೆಯಿದ್ದು, ಪ್ರವಾಸೋದ್ಯಮ ಚಟುವಟಿಕೆಗಳಿಂದ ಆದಾಯ ಬಂದಿದೆ. ಇದೀಗ ಅದನ್ನು ಬಳಸಿಕೊಂಡು ಸುರಕ್ಷತೆ ಒದಗಿಸಲಾಗುತ್ತದೆ’ ಎಂದು ತಿಳಿಸಿದರು. ಕಡಲತೀರದಲ್ಲಿನ ಪ್ರವಾಸಿಗರ ರಕ್ಷಣೆಗೆ ಲೈಫ್‌ಗಾರ್ಡ ಸಿಬ್ಬಂದಿ, ಪೊಲೀಸರು ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.