ಹುಬ್ಬಳ್ಳಿ : ಸಿಟಿ ರವಿ ಆ ರೀತಿ ಹೇಳಿಲ್ಲ ಎನ್ನುತ್ತಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಪಕ್ಕದಲ್ಲಿದ್ದವರು ಆ ಮಾತು ಆಡಿದ್ದಾರೆ ಎಂದು ಹೇಳುತ್ತಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ತನಿಖೆ ಆಗಲೆಂದೇ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ ಎಂದು ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ ಪ್ರಕರಣದ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡಲ್ಲ. ತನಿಖೆ ನಡೆಯುತ್ತಿರುವಾಗ ನಾವು ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದರು.
ಸಿ.ಟಿ ರವಿ ಪ್ರಕರಣ ಮುಗಿದ ಅಧ್ಯಾಯ ಎಂಬ ಸ್ಪೀಕರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸ್ಪೀಕರ್ ತಮ್ಮ ಕೆಲಸ ತಾವು ಮಾಡುತ್ತಾರೆ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲಿಯ ಸಾಧಕ ಬಾಧಕಗಳನ್ನು ನೋಡಿಕೊಂಡು ಹೇಳಿಕೆ ಕೊಟ್ಟಿರಬಹುದು. ಕಾನೂನು ಪ್ರಕ್ರಿಯೆ ನಡೆಯುವಾಗ ಕೆಲವು ವಿಳಂಬವಾಗಬಹುದು. ಆದರೆ ತನಿಖೆಯನ್ನು ಸರಿಯಾಗಿ ಮಾಡಬೇಕಾಗುತ್ತೆ. ಪ್ರಕರಣದ ಸತ್ಯಾಸತ್ಯತೆ ನೋಡಬೇಕಿದೆ. ಸಿಟಿ ರವಿ ಪ್ರಕರಣವನ್ನ ಈಗಾಗಲೇ ಸಿಐಡಿಗೆ ಹಸ್ತಾಂತರಿಸಲಾಗಿದೆ ಎಂದರು.
ಸಿಟಿ ರವಿ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಪ್ರಕರಣ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ಕೆಲವೊಂದು ಕಾರಣಕ್ಕೆ ವಿಳಂಬವಾಗಿರಬಹುದು. ಪೊಲೀಸ್ ಇಲಾಖೆ ಜವಾಬ್ದಾರಿಯುತ ಇಲಾಖೆ. ಸಿಎಂ ಅಥವಾ ಗೃಹ ಸಚಿವರ ಆದೇಶವನ್ನು ಮಾತ್ರ ಪೊಲೀಸರು ಪಾಲಿಸುತ್ತಾರೆ. ಬೇರೆ ಯಾರೇ ಆದೇಶ ಮಾಡಿದರೂ ಅದನ್ನು ಪಾಲಿಸಲ್ಲ. ಅವರಿವರು ಆರೋಪ ಮಾಡುತ್ತಾರೆ ಎಂದು ನಾವು ಇಲಾಖೆ ನಡೆಸಲ್ಲ. ಕಾನೂನು ಚೌಕಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ಜಿ.ಪರಮೇಶ್ವರ್ ಅಸಮರ್ಥ ಗೃಹ ಸಚಿವ ಎಂಬ ಜೋಶಿ ಲೇವಡಿ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಹ್ಲಾದ್ ಜೋಶಿ ಅಸಮರ್ಥ ಕೇಂದ್ರ ಸಚಿವ ಎಂದರೆ ಒಪ್ಪಿಕೊಳ್ತಾರಾ? ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ. ಅದಕ್ಕೆ ಅವರು ಹಾಗೆ ಹೇಳಿದ್ದಾರೆ ಎಂದು ಗುಡುಗಿದರು.