ಬೆಂಗಳೂರು: ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು 14.600 ಕೆಜಿಯಷ್ಟು ಚಿನ್ನಾಭರಣ ಖರೀದಿಸಿ ವಂಚನೆ ಮಾಡಿರುವ ಘಟನೆ ಆರ್ಆರ್ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಐಶ್ವರ್ಯ ಗೌಡ, ನಟ ಧರ್ಮೇಂದ್ರ ಹಾಗೂ ಹರೀಶ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಐಶ್ವರ್ಯ ಗೌಡ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ನಿಂದ 11 ಬಾರಿ ಚಿನ್ನ ಖರೀದಿಸಿ ವಂಚಿಸಿದ್ದಾರೆ. ಈ ಸಂಬಂಧ ಚಿನ್ನದಂಗಡಿ ಮಾಲೀಕರಾದ ವನಿತಾ ಐತಾಳ್ ಅವರು ದೂರು ನೀಡಿದ್ದು, ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಐಶ್ವರ್ಯ ಗೌಡ ಕಳೆದ ಜನವರಿಯಿಂದ ಇಲ್ಲಿಯವರೆಗೂ 14 ಕೆಜಿ 600 ಗ್ರಾಂನಷ್ಟು ಚಿನ್ನಾಭರಣ ಖರೀದಿಸಿದ್ದರು. ಹೌದು,ಐಶ್ವರ್ಯ ಗೌಡ 8.41 ಕೋಟಿ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದಾರೆ. ಇನ್ನು ಹಣ ಕೊಡದೇ ಇದ್ದಾಗ, ಡಿಕೆ ಸುರೇಶ್ ಕಡೆಯಿಂದ ಮಾಲೀಕರಿಗೆ ಕರೆ ಮಾಡಿಸೋದಾಗಿ ಬೆದರಿಕೆ ಹಾಕಿದ್ದರು. ಈ ವೇಳೆ ಸಿನಿಮಾ ನಟ ಧರ್ಮೇಂದ್ರ ಎಂಬುವವರಿಂದ ಐಶ್ವರ್ಯಗೌಡ ಕರೆ ಮಾಡಿಸಿ, ಬೆದರಿಕೆ ಹಾಕಿದ್ದರು ಎಂದು ವನಿತಾ ಆರ್ಆರ್ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಘಟನೆ ಬಗ್ಗೆ ಚಂದ್ರ ಲೇಔಟ್ನಲ್ಲಿರುವ ವಾರಾಹೀ ವರ್ಲ್ಡ್ ಆಫ್ ಗೋಲ್ಡ್ ಜ್ಯುವೆಲ್ಲರಿ ಶಾಪ್ ಮಾಲೀಕರಾದ ವನಿತಾ ಅವರು ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.