ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದ ಯೋಧರೊಬ್ಬರು (Soldier) ಹುತಾತ್ಮರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ (Poonch) ಜಿಲ್ಲೆಯಲ್ಲಿ ಸೇನಾ ವಾಹನ ಪಲ್ಟಿಯಾದ ಪರಿಣಾಮ ಚಿಕ್ಕೋಡಿಯ ಯೋಧ ಸುಭಾಷ ಖೋತ ಸೇರಿ ಐವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ.
ಸೇನಾ ವಾಹನವೊಂದು (military van) ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದ ಬಲ್ನೋಯಿ ಬಳಿ ದಾರಿ ತಪ್ಪಿ ಕಂದಕಕ್ಕೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಮಾಹಿತಿ ತಿಳಿದ ತಕ್ಷಣ ಸೇನಾಧಿಕಾರಿಗಳು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಈ ವೇಳೆ ಗಾಯಗೊಂಡ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಈ ಘೋರ ದುರಂತದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದ ಯೋಧ ಧರ್ಮರಾಜ ಸುಭಾಷ ಖೋತ ಸಹ ಹುತಾತ್ಮರಾಗಿದ್ದಾರೆ.
ರಕ್ಷಣಾ ಸಿಬ್ಬಂದಿ ಐವರು ಮೃತ ಯೋಧರ ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ ವಾಹನದಲ್ಲಿ ಹತ್ತು ಸೈನಿಕರಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುಮಾರು 100-150 ಅಡಿ ಆಳದ ಕಂದಕಕ್ಕೆ ಸೇನಾ ವಾಹನವು ಬಿದ್ದಿದೆ ಎನ್ನಲಾಗಿದ್ದು, ಮಾಹಿತಿ ತಿಳಿದ ಕೂಡಲೇ 11 ಎಂಎಲ್‌ಐನ ಕ್ವಿಕ್ ರೆಸ್ಪಾನ್ಸ್ ಟೀಮ್ (QRT) ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.