ಬಾಲಿವುಡ್ ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿಯೋರ್ವರು ನಟನೆಗೆ ಬ್ರೇಕ್ ಕೊಟ್ಟು ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಐಪಿಎಸ್ ಅಧಿಕಾರಿಯಾಗಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಅವರು ಬೇರ್ಯಾರು ಅಲ್ಲ, ಸಿಮಲಾ ಪ್ರಸಾದ್. ಇವರ ಬಗ್ಗೆ ಹೆಚ್ಚಿನವರಿಗೆ ತಿಳಿಯದೇ ಇರಬಹುದು. ಆದರೆ ಈ ನಟಿ ಬಾಲಿವುಡ್ ಪ್ರೇಕ್ಷಕರಿಗೆ ಚಿರಪರಿಚಿತ.
ನಟಿ ಸಿಮಲಾ ಪ್ರಸಾದ್, ಭೋಪಾಲ್ ನಗರದಲ್ಲಿ 8 ಅಕ್ಟೋಬರ್ 1980 ರಂದು ಜನಿಸಿದರು. ಸಿಮಲಾ ಪ್ರಸಾದ್ ತಂದೆ ಡಾ. ಭಗೀರಥ ಪ್ರಸಾದ್ ಐಎಎಸ್ ಅಧಿಕಾರಿ. ಅವರ ಹಾದಿಯನ್ನೇ ಅನುಸರಿಸಿ ಐಪಿಎಸ್ ಸಿಮಲಾ ಪ್ರಸಾದ್ ಅಧಿಕಾರಿಯಾದರು. ಈಕೆಯ ಸೌಂದರ್ಯಕ್ಕೆ ಬಾಲಿವುಡ್ ಫಿದಾ ಆಗಿತ್ತು. ಈ ನಟಿ ತನ್ನ ಸೌಂದರ್ಯದಿಂದ ಚಿತ್ರರಂಗವನ್ನು ಸೆಳೆಯುತ್ತಿದ್ದರು.
ಬಿ. ಕಾಂ ಓದುತ್ತಿರುವಾಗಲೇ ಹಲವು ನಾಟಕಗಳಲ್ಲಿ ನಟಿಸಿದ್ದರು. 2017 ರಲ್ಲಿ ‘ಅಲಿಫ್’ ಮತ್ತು 2019 ರಲ್ಲಿ ಬಿಡುಗಡೆಯಾದ ‘ನಕಾಶ್’ ನಲ್ಲಿ ಸಿಮಲಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.
ಬಹುಶಃ ಇದಾದ ನಂತರ ಸಿಮಲಾಗೆ ಇನ್ನಷ್ಟು ಒಳ್ಳೆ ಸಿನಿಮಾಗಳು ಸಿಗುತ್ತಿದ್ದವು. ಆದರೆ ಆಕೆಗೆ ರಾಜಕೀಯ ಮತ್ತು ಸಮಾಜಶಾಸ್ತ್ರದಲ್ಲಿ ಆಸಕ್ತಿ ಇತ್ತು. ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ, ಮೊದಲ ಪ್ರಯತ್ನದಲ್ಲಿ ಪಿಎಸ್‌ಸಿಯಲ್ಲಿ ಪಾಸ್ ಆದರು. ಅಲ್ಲದೇ ಡಿಎಸ್ಪಿ ಹುದ್ದೆಯೂ ಸಿಕ್ಕಿತು. ಆದರೆ ಆಕೆಯ ಪಯಣ ಅಲ್ಲಿಗೇ ನಿಲ್ಲಲಿಲ್ಲ. ಐಪಿಎಸ್ ಗುರಿಯತ್ತ ಸಾಗಿತು. ಯಾವುದೇ ಕೋಚಿಂಗ್ ಇಲ್ಲದೆ UPSC ಪರೀಕ್ಷೆಯಲ್ಲಿ ತೇರ್ಗಡೆಯಾದಳು. ನಟಿಯಿಂದ IPS ಅಧಿಕಾರಿಯಾಗಿ ಸಿಮ್ಲಾ ಅವರ ಪಯಾಣವು ನಿಜವಾಗಿಯೂ ಸ್ಫೂರ್ತಿದಾಯಕವಾಗಿದೆ ಮತ್ತು ಪ್ರಶಂಸನೀಯವಾಗಿದೆ.