ಬೆಂಗಳೂರು : ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ನಾಯಕರು ಪದೇ ಪದೇ ಅಪಮಾನ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ದಲಿತರ ವಿರೋಧಿ. ವಯನಾಡ್‌ನಲ್ಲಿ ಪ್ರಿಯಾಂಕ್ ವಾದ್ರಾ ನಾಮಪತ್ರ ಸಲ್ಲಿಕೆ ವೇಳೆ ಮಲ್ಲಿಕಾರ್ಜುನ ಖರ್ಗೆಯವರನ್ನ ಬಾಗಿಲ ಬಳಿ ನಿಲ್ಲಿಸಿದ್ದರು. ಮೊನ್ನೆ ಬೆಳಗಾವಿಯಲ್ಲಿ ನಡೆಯೋ ಎಐಸಿಸಿ ಅಧಿವೇಶನಕ್ಕೆ ರಾಹುಲ್ ಗಾಂಧಿ ಬಂದ ಸಮಯದಲ್ಲಿ ಡಿ.ಕೆ ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನ ತಳ್ಳೋ ಕೆಲಸ ಮಾಡಿದ್ದಾರೆ. ಇದನ್ನು ನೋಡಿದ್ರೆ ಕಾಂಗ್ರೆಸ್ ದಲಿತ ವಿರೋಧಿಗಳು ಎಂದು ಗೊತ್ತಾಗುತ್ತದೆ. ಖರ್ಗೆ ಅವರನ್ನು ಕಾಂಗ್ರೆಸ್ ಸಿಎಂ ಮಾಡಲಿಲ್ಲ. ಯಾಕೆ ಮಾಡಲಿಲ್ಲ? ದಲಿತರನ್ನ ಅಪಮಾನ ಮಾಡೋದು ಕಾಂಗ್ರೆಸ್ ಗುಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅಂಬೇಡ್ಕರ್‌ಗೆ ಗೌರವ ಕೊಡೋ ಕೆಲಸ ಮಾಡಿಲ್ಲ. ಜಗಜೀವನರಾಮ್ ಸೇರಿ ಎಲ್ಲಾ ನಾಯಕರಿಗೆ ಅಪಮಾನ ಮಾಡಿದ್ದಾರೆ. ಕೆಲವು ದಲಿತ ಸಂಘಟನೆಗಳು ಅಮಿತ್ ಶಾ ವಿರುದ್ಧ ಪ್ರತಿಭಟನೆ ಮಾಡ್ತಿದ್ದಾರೆ. ಅಮಿತ್ ಶಾ ಎಲ್ಲೂ ಕೂಡಾ ಅಂಬೇಡ್ಕರ್‌ಗೆ ಅಪಮಾನ ಮಾಡಿಲ್ಲ. ಅಪಮಾನ ಮಾಡಿದ್ದು ಕಾಂಗ್ರೆಸ್, ಇದನ್ನ ಅಮಿತ್ ಶಾ ಹೇಳಿದ್ದಕ್ಕೆ ಅವರ ವಿರುದ್ಧ ಹೇಳಿಕೆ ತಿರುಚಿ ಆರೋಪ ಮಾಡ್ತಿದ್ದಾರೆ. ಹೀಗಿದ್ದರೂ ಯಾಕೆ ನಮ್ಮ ಬಂಧುಗಳು ಪ್ರತಿಭಟನೆ ಮಾಡ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.
ದಲಿತ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಾಪದ ಕೊಡ ತುಂಬಿದೆ. ಕಾಂಗ್ರೆಸ್‌ನ ಎಲ್ಲಾ ಸಂಭ್ರಮದ ದಿನಗಳು ಸಂತಾಪದ ದಿನಗಳು ಆಗಲಿವೆ. ಅರ್ಥ ಮಾಡಿಕೊಳ್ಳಿ, ಅಂಬೇಡ್ಕರ್‌ಗೆ ಬಿಜೆಪಿ ಅಪಮಾನ ಮಾಡಿಲ್ಲ. ಮೀಸಲಾತಿ ಜಾಸ್ತಿ ಮಾಡಿದ್ದು ಬಿಜೆಪಿ. ಇದನ್ನು ದಲಿತ ಬಂಧುಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹರಿಹಾಯ್ದರು.