ಬೆಂಗಳೂರು: ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ ಎಂಬ ಮಾತು ಸಾಮಾನ್ಯವಾಗಿ ಕೇಳಿಯೇ ಇರುತ್ತೇವೆ. ಅದರಲ್ಲೂ ಸಾಕು ನಾಯಿಯ ನಿಯತ್ತಿಗೆ ಸೋಲದ ಮನುಷ್ಯರೇ ಇಲ್ಲ ಎಂದರೂ ತಪ್ಪಾಗಲಾರದು. ಪ್ರೀತಿಯಿಂದ ಸಾಕಿದ ನಾಯಿ ನಿಧನ ಹೊಂದಿದರೆ ಅದರಿಂದಾಗುವ ನೋವನ್ನು ಮಾತುಗಳಲ್ಲಿ ಹೇಳಲು ಸಾಧ್ಯವೇ ಇಲ್ಲ. ಇಂತದ್ದೇ ಪರಿಸ್ಥಿತಿ ನಟ ಶಿವರಾಜ್‌ಕುಮಾರ್ ಅವರ ಕುಟುಂಬಕ್ಕೆ ಒದಗಿಬಂದಿದೆ.
ನಟ ಶಿವರಾಜಕುಮಾರ್ ಮನೆಯಲ್ಲಿ ಸಾಕಿದ್ದ ನೀಮೋ ಹೆಸರಿನ ಶ್ವಾನ ನಿಧನವಾಗಿದ್ದು, ಗೀತಾ ಶಿವರಾಜ್‌ಕುಮಾರ್ ಭಾವನಾತ್ಮಕ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಾವು ಅಮೆರಿಕಕ್ಕೆ ತೆರಳಿದ ಬಳಿಕವೇ ತಾನು ಹೊರಡಬೇಕೆಂದು ನೀಮೋ ನಿರ್ಧಾರ ಮಾಡಿದ್ದ ಎನಿಸುತ್ತದೆ ಎಂದು ಗೀತಾ ನೋವು ತೋಡಿಕೊಂಡಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆಗಾಗಿ ಶಿವಣ್ಣ ದಂಪತಿ ಸದ್ಯ ಅಮೆರಿಕಕ್ಕೆ ತೆರಳಿದ್ದು, ಶಸ್ತ್ರಚಿಕಿತ್ಸೆ ಬಳಿಕ ಅಲ್ಲಿಯೇ ಇದ್ದಾರೆ. ಈ ಹೊತ್ತಲ್ಲೇ ಇತ್ತ ಬೆಂಗಳೂರಿನ ಮನೆಯಲ್ಲಿ ತಾವು ಪ್ರೀತಿಯಿಂದ ಸಾಕಿದ್ದ ಶ್ವಾನ ಇನ್ನಿಲ್ಲವಾಗಿದೆ. ಪ್ರಾಣಿಗಳು ನಮ್ಮನ್ನು ಬಿಟ್ಟು ಹೋಗುವಾಗ ನಮ್ಮ ನೋವನ್ನೂ ಅವು ತಮ್ಮ ಜೊತೆಯಲ್ಲೇ ತೆಗೆದುಕೊಂಡು ಹೋಗುತ್ತವಂತೆ. ನನ್ನ ನೀಮೋ ಕೂಡ ಶಿವಣ್ಣನಿಗೆ ಇದ್ದ ನೋವನ್ನು ಶಾಶ್ವತವಾಗಿ ತೆಗೆದುಕೊಂಡು ಹೋಗಿದ್ದಾನೆ ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.
ಡಿ. 24ರ ಸಂಜೆ 6 ಗಂಟೆಗೆ ಆರಂಭವಾಗಿ 4-5 ಗಂಟೆಗಳ ಕಾಲ ಆಪರೇಷನ್ ನಡೆದಿದ್ದು, ಅದು ಯಶಸ್ವಿಯಾಗಿದೆ. ಶಿವರಾಜ್‌ಕುಮಾರ್ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಸುಧಾರಿಸುತ್ತಿದ್ದಾರೆ. ತಮಗೆ ಗಂಭೀರ ಕಾಯಿಲೆ ಎಂದು ಗೊತ್ತಾದಲ್ಲಿಂದಲೂ ಶಿವರಾಜ್‌ಕುಮಾರ್ ಅದನ್ನು ಧೈರ್ಯವಾಗಿ, ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಾ ಬಂದಿದ್ದರು. ಅದೇ ರೀತಿ ಸರ್ಜರಿಯನ್ನು ಕೂಡ ಪಾಸಿಟಿವ್ ಆಗಿ ತೆಗೆದುಕೊಂಡರು ಎಂದು ವೈದ್ಯರು ತಿಳಿಸಿದ್ದಾರೆ.