ಚಿತ್ರದುರ್ಗ : ವೃತ್ತಿ ಶಿಕ್ಷಣದಿಂದ ಸ್ವ-ಉದ್ಯೋಗಿಗಳಾಗಿ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಬಹುದೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್ ಕರೆ ನೀಡಿದರು.
ಕೋಟೆ ಮುಂಭಾಗವಿರುವ ಮಹಾರಾಣಿ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ಕಲಿಕೋತ್ಸವ ಹಾಗೂ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದು ತುಂಬಾ ಕಷ್ಟ. ಆದ್ದರಿಂದ ಶಿಕ್ಷಣದ ಜೊತೆ ವೃತ್ತಿ ಶಿಕ್ಷಣ ಹಾಗೂ ಕೌಶಲ್ಯವನ್ನು ಕಲಿಯುವ ಅನಿವಾರ್ಯತೆಯಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ತೋಟಗಾರಿಕೆ, ರೇಷ್ಮೆ, ಕೃಷಿ, ಹೈನುಗಾರಿಕೆ, ಟೈಲರಿಂಗ್ ಬಗ್ಗೆ ಶಿಕ್ಷಕರುಗಳು ಮಾರ್ಗದರ್ಶನ ನೀಡಬೇಕು. ಮಕ್ಕಳನ್ನು ಕೇವಲ ಅಂಕಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ. ಕೌಶಲ್ಯಗಳ ಮೂಲಕ ಬದುಕು ರೂಪಿಸಿಕೊಳ್ಳುವಂತೆ ಮಕ್ಕಳನ್ನು ತಯಾರು ಮಾಡುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ ಎಂದು ಹೇಳಿದರು.
ವಿದ್ಯಾಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ ಮಾತನಾಡಿ ವೃತ್ತಿ ಶಿಕ್ಷಣ ಎನ್ನುವುದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ ಶಾಲೆಯ ಹೊರ ಸೌಂದರ್ಯ ಹೆಚ್ಚಿಸಿ ಪರಿಸರ ರಕ್ಷಿಸಲು ಸಹಕಾರಿಯಾಗುತ್ತದೆ. ಸ್ವಂತ ಉದ್ಯೋಗ ಮಹಾತ್ಮಗಾಂಧಿಜಿಯವರ ಪರಿಕಲ್ಪನೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮಾತನಾಡಿ ಹೊಸ ತಂತ್ರಜ್ಞಾನದಿಂದ ಗುಡಿ ಕೈಗಾರಿಕೆ, ಕರಕುಶಲ ಕಲೆಯನ್ನು ಮಕ್ಕಳಲ್ಲಿ ಬೆಳೆಸಲು ಸಹಕಾರಿಯಾಗುತ್ತದೆ.
ಅದಕ್ಕಾಗಿ ವೃತ್ತಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಶಿಕ್ಷಣದ ಜೊತೆ ವೃತ್ತಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕೆಂದರು.
ವಿಷಯ ಪರಿವೀಕ್ಷಕರುಗಳಾದ ಎಸ್.ಟಿ.ಮಹಲಿಂಗಪ್ಪ, ಕೆ.ಶಿವಣ್ಣ, ಪ್ರಶಾಂತ್, ಗೋವಿಂದಪ್ಪ, ಚಂದ್ರಣ್ಣ, ಆಸ್ಮ ಫಿರ್ದೋಸ್, ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ
ಎಂ.ಆರ್.ಅನಂತಪ್ಪ, ಕಾರ್ಯದರ್ಶಿ ಪ್ರಕಾಶ್, ಮಹಾರಾಣಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್.ಸಂದೀಪ್, ನಿಕಟಪೂರ್ವ ವೃತ್ತಿ ಶಿಕ್ಷಣ ವಿಷಯ ಪರಿವೀಕ್ಷಕರಾದ ಬಸವರಾಜ್ ಓಲೆಕಾರ್, ತಾಲ್ಲೂಕು ವೃತ್ತಿ ಶಿಕ್ಷಕ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ಪ್ರೌಢಶಾಲೆಯ ವೃತ್ತಿ ಶಿಕ್ಷಕರುಗಳು ವಸ್ತು ಪ್ರದರ್ಶನದಲ್ಲಿ ಉಪಸ್ಥಿತರಿದ್ದರು.
ಮಲ್ಲಾಡಿಹಳ್ಳಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ತೋಟಗಾರಿಕೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.