ಶ್ರೀ ಕ್ಷೇತ್ರ ಧರ್ಮಸ್ಥಳ ನಾಡಿನ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದು. ದಿನನಿತ್ಯವೂ ಸಾವಿರಾರು ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ.
ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಹಗಲು- ರಾತ್ರಿ ಎನ್ನದೆ, ಮಳೆ-ಬಿಸಿಲೆನ್ನದೆ ಸರತಿ ಸಾಲಿನಲ್ಲಿ ನಿಂತು ಸ್ವಾಮಿಯನ್ನು ಕಂಡು ಸಂತೋಷ ಪಡುತ್ತಾರೆ. ಹೀಗಾಗಿ ಈ ಭಕ್ತರ ಅನುಕೂಲಕ್ಕಾಗಿ ಕ್ಷೇತ್ರದ ಆಡಳಿತ ಮಂಡಳಿ ದೇಶದ ಪ್ರಮುಖ ಧಾರ್ಮಿಕ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ತಿರುಪತಿ ದೇವಸ್ಥಾನದ ಮಾದರಿಯಲ್ಲೇ ಧರ್ಮಸ್ಥಳದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡುತ್ತಿದೆ. ಇದಕ್ಕಾಗಿ ನಿರ್ಮಿಸಿರುವ ಕಟ್ಟಡ ನಾಳೆ (ಜ. 7) ಉದ್ಘಾಟನೆಗೊಳ್ಳಲಿದೆ. ಇಲ್ಲಿ ಭಕ್ತರ ಕ್ಯೂ ವ್ಯವಸ್ಥೆ ತಿರುಪತಿ ದೇವಸ್ಥಾನದಲ್ಲಿರುವಂತೆ ಇರಲಿದೆ.
ಸರತಿಯಲ್ಲಿ ನಿಲ್ಲುವ ಭಕ್ತರ ಅನುಕೂಲಕ್ಕಾಗಿ ತಿರುಪತಿ ಮಾದರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಸಾನ್ನಿಧ್ಯ ಎಂಬ ಸಂಕೀರ್ಣವನ್ನು ಹೊಸದಾಗಿ ನಿರ್ಮಿಸಲಾಗಿದ್ದು ಇದರ ಉದ್ಘಾಟನೆಯು ಇದೇ ಜನವರಿ 7ರಂದು ಮಧ್ಯಾಹ್ನ 2 ಗಂಟೆಗೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಉದ್ಘಾಟಿಸಲಿದ್ದಾರೆ.
				
															
                    
                    
                    
                    
































