ತುಮಕೂರು : ಡಿಸಿಎಂ ಡಿ.ಕೆ ಶಿವಕುಮಾರ್ ಬೇಜಾರಾಗಲು ಅವರ ಆಸ್ತಿ ಏನಾದರೂ ಬರೆಸಿಕೊಂಡಿದ್ದೇವಾ? ಇದೆಲ್ಲ ಸುಮ್ಮನೆ ಅಷ್ಟೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಚಿವ ಕೆಎನ್ ರಾಜಣ್ಣ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿನ್ನರ್ ಪಾರ್ಟಿ ವಿಚಾರದ ಕುರಿತು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿನ್ನರ್ ಪಾರ್ಟಿ ಕ್ಯಾನ್ಸಲ್ ಎಲ್ಲಿ ಆಗಿದೆ? ಮುಂದೂಡಿದ್ದೇವೆ ಅಷ್ಟೇ, ಕ್ಯಾನ್ಸಲ್ ಇಲ್ಲ. ಈಗಾಗಲೇ ಈ ಬಗ್ಗೆ ಪರಮೇಶ್ವರ್ ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮೊನ್ನೆ ನಡೆದಿರುವ ಡಿನ್ನರ್ ಪಾರ್ಟಿ ಬಗ್ಗೆ ಗೊಂದಲ ಆಗಿದೆ. ಆ ಗೊಂದಲದ ಜೊತೆಗೆ ಇನ್ನೊಂದು ಗೊಂದಲ ಆಗೋದು ಬೇಡ. ಅದನ್ನು ಮುಂದೂಡಬೇಕು ಅಂತ ಹೇಳಿದೆ, ಅದಕ್ಕೆ ಮುಂದೂಡಿದ್ದೇವೆ ಎಂದು ತಿಳಿಸಿದರು.
ಪ್ರೀ ಯೂನಿವರ್ಸಿಟಿಗಳಲ್ಲಿ ಎಸ್ಸಿ, ಎಸ್ಟಿ ಮಕ್ಕಳಿಗೆ ಹಾಸ್ಟೆಲ್ ಸೀಟು ಸಿಗುತ್ತಿಲ್ಲ. ಜೊತೆಗೆ ಮ್ಯಾನೇಜ್ಮೆಂಟ್ ಸೀಟ್ ಪಡೆದ ಎಸ್ಸಿ, ಎಸ್ಟಿ ಮಕ್ಕಳಿಗೆ ಸ್ಕಾಲರ್ಶಿಪ್ ಸಿಗುತ್ತಿಲ್ಲ, ಹಾಸ್ಟೆಲ್ ಕೊಡುತ್ತಿಲ್ಲ. ಇಂತಹ ವಿಚಾರಗಳ ಬಗ್ಗೆ ನಾವು ಚರ್ಚೆ ಮಾಡಲು ಮೀಟಿಂಗ್ ಕರೆದರೆ ಮಾಡಬೇಡಿ ಎನ್ನುತ್ತಾರೆ. ಇವರೆಲ್ಲಾ ಏನು ಎಸ್ಸಿ ಎಸ್ಟಿಗಳ ವಿರೋಧಿಗಳಾ? ಇವೆಲ್ಲಾ ಬಹಳಷ್ಟು ದಿನ ನಡೆಯಲ್ಲ. ಹಾಸ್ಟೆಲ್ ಸೀಟ್ ಸಿಗಲ್ಲ. ಸಣ್ಣಪುಟ್ಟ ಸಾಲ ಮಾಡಿ ಮ್ಯಾನೇಜ್ಮೆಂಟ್ ಕೋಟಾದಲ್ಲಿ ಸೀಟು ತೆಗೆದುಕೊಂಡವನಿಗೆ ಸ್ಕಾಲರ್ಶಿಪ್ ಇಲ್ಲ. ಇದು ಎಸ್ಸಿ, ಎಸ್ಟಿ ಮಕ್ಕಳ ಜ್ವಲಂತ ಸಮಸ್ಯೆ. ಇಂತಹ ಹತ್ತು ಹಲವಾರು ಸಮಸ್ಯೆಗಳಿವೆ. ಈ ಬಗ್ಗೆ ಚರ್ಚೆ ಮಾಡಲು ಮೀಟಿಂಗ್ ಕರೆದರೆ ಇದಕ್ಕೆ ರಾಜಕೀಯ ಬಣ್ಣ ಕೊಟ್ಟು ಮಾಡಬೇಡಿ ಎಂದು ಹೇಳುತ್ತಾರೆ. ಇದು ಎಸ್ಸಿ, ಎಸ್ಟಿ ಸಮಾಜಕ್ಕೆ ಮಾಡುವ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿನ್ನರ್ ವಿಚಾರ ಮುಂದೆ ಮೀಟಿಂಗ್ ಮಾಡಿ ಡೇಟ್ ತಿಳಿಸುತ್ತೇವೆ. ಮುಂದಿನ ತಿಂಗಳ 14ನೇ ತಾರೀಕು ಎಂಎಂ ಹಿಲ್ಸ್ನಲ್ಲಿ ಕ್ಯಾಬಿನೆಟ್ ನಡೆಯುತ್ತದೆ. ಚಾಮರಾಜನಗರ ಜಿಲ್ಲೆ ಹೋದರೆ ಸಿಎಂ, ಸಚಿವ ಸ್ಥಾನ ಹೋಗುತ್ತದೆ ಎಂದು ಹೇಳುತ್ತಿದ್ದಾರೆ. ಅಷ್ಟರೊಳಗೆ ಸಭೆ ಮಾಡುತ್ತೇವೆ. ಇಲ್ಲ ಅಂದರೆ ಕ್ಯಾಬಿನೆಟ್ ಮೀಟಿಂಗ್ ಬಳಿಕ ಸಭೆ ಮಾಡಿ ತಿಳಿಸುತ್ತೇವೆ ಎಮದು ಹೇಳಿದರು.