ಬೆಂಗಳೂರು: ಪಶ್ಚಿಮ ಘಟ್ಟದಲ್ಲಿ ಕಳೆದ ಹಲವು ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ 6 ಮಂದಿ ನಕ್ಸಲರು ಕೊನೆಗೂ ಸಿಎಂ ಸಿದ್ದರಾಮಯ್ಯ ಮುಂದೆ ಶರಣಾಗತರಾಗಿದ್ದಾರೆ.
ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ವಸಂತ್, ಜಿಶಾ ಶರಣಾದ ನಕ್ಸಲರು. ಪೊಲೀಸ್ ಭದ್ರತೆಯೊಂದಿಗೆ ನಕ್ಸಲರನ್ನು ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಗೆ ಸಂಜೆ ಹೊತ್ತಿಗೆ ಕರೆತರಲಾಯಿತು. ಬಳಿಕ ಸಿಎಂ ಸಿದ್ದರಾಮಯ್ಯ ಅವರನ್ನು ನಕ್ಸಲರು ಭೇಟಿಯಾದರು. ಈ ವೇಳೆ ನಕ್ಸಲರ ಜೊತೆ ಸಿಎಂ ಮಾತುಕತೆ ನಡೆಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್ ಮತ್ತು ಡಿಜಿಪಿ ಅಲೋಕ್ ಮೋಹನ್ ಸಮ್ಮುಖದಲ್ಲಿ ನಕ್ಸಲರು ಸಿಎಂ ಮುಂದೆ ಶರಣಾಗತಿ ಪ್ರಕ್ರಿಯೆ ನಡೆಯಿತು. 6 ಮಂದಿ ನಕ್ಸಲರು ಶಸ್ತ್ರ ತ್ಯಜಿಸಿ ಶರಣಾದರು. ಈ ವೇಳೆ ನಕ್ಸಲರ ಜೊತೆ ಅವರ ಕುಟುಂಬಸ್ಥರು ಸಹ ಹಾಜರಿದ್ದರು.
ಬೆಳಗ್ಗೆ 7 ಗಂಟೆಗೆ ಶೃಂಗೇರಿಯಿಂದ ಹೊರಟ ನಕ್ಸಲರ ತಂಡ ಚಿಕ್ಕಮಗಳೂರಿನಲ್ಲಿ ಮಾತುಕತೆ ಮುಗಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು. ಸಂಜೆ 6 ಗಂಟೆ ಹೊತ್ತಿಗೆ ಸಿಎಂ ಗೃಹ ಕಚೇರಿ ಕೃಷ್ಣಗೆ ತಲುಪಿತು. ಆ ತಂಡವನ್ನು ಚೆಕ್ ಇನ್ ಮಾಡಿ ಪೊಲೀಸರು ಒಳಗೆ ಬಿಟ್ಟರು. ಸಿಎಂ ಕಚೇರಿ ಮುಂದೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ಬಳಿಕ ಸಿಎಂ ಮುಂದೆಯೇ ನಕ್ಸಲರು ಶಸ್ತ್ರ ತ್ಯಾಗ ಮಾಡಿದರು. ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.