ಕಲ್ಪಾಂತ್ಯದಲ್ಲಿ ಮಹಾವಿಷ್ಣು ವಟಪತ್ರಶಾಯಿಯಾಗಿ ಯೋಗನಿದ್ರೆಯಲ್ಲಿದ್ದಾಗ ಆತನ ಕಿವಿಯ ಗುಗ್ಗೆಯಿಂದ (ಕರ್ಣಮಲ) ಇಬ್ಬರು ರಾಕ್ಷಸರು ಜನಿಸುತ್ತಾರೆ. ಬ್ರಹ್ಮನ ಪ್ರೇರಣೆಯಿಂದ ಅವರಲ್ಲಿ ವಾಯುಸಂಚಾರವಾಗುತ್ತದೆ. ರಕ್ಷಸರಾಗಿ ಬಲಶಾಲಿಗಳಾದ ಅವರು ಮಹಾಬಲರಾಗಿ ದೇವಲೋಕವನ್ನೇ ವಶಪಡಿಸುತ್ತಾರೆ. ಬ್ರಹ್ಮ ಅವರನ್ನು ಸ್ಪರ್ಶಿಸಿ ನೋಡಲು ಒಬ್ಬ ಮೃದುವಾಗಿ ಕಂಡ. ಅವನೇ ಮಧು. ಮತ್ತೊಬ್ಬ ಕಲ್ಲಿನಂತೆ ಕರ್ಕಶವಾಗಿ ಕಂಡ. ಅವನೇ ಕೈಟಭ.
ಪರಾಕ್ರಮಿಗಳಾದ ಮಧು ಕೈಟಭ ಇವರನ್ನು ವಿಷ್ಣು ಸಂಹರಿಸಿದ. ವೈಕುಂಠ ಲೋಕದ ಉತ್ತರ ದ್ವಾರದ ಮೂಲಕ ಅವರನ್ನು ಪ್ರವೇಶಿಸುವಂತೆ ಮಾಡಿ ಸದ್ಗತಿಯನ್ನು ಕರುಣಿಸುತ್ತಾನೆ. ಸದ್ಗತಿಯಲ್ಲಿ ಕರುಣಿಸಿದ್ದು ಏಕಾದಶಿಯಂದು. ಈ ಕಾರಣಕ್ಕೆ ವೈಕುಂಠ ಏಕಾದಶಿಯಂದು ವಿಶೇಷ ದ್ವಾರವನ್ನು ನಿರ್ಮಿಸಿ, ಅದರ ಮೂಲಕ ಪ್ರವೇಶಿಸಿ ದೇವರ ದರ್ಶನ ಪಡೆಯುವ ಆಚರಣೆ ಇಂದು ಪ್ರಚಲಿತಕ್ಕೆ ಬಂದಿದೆ. ಭಕ್ತಿಪೂರ್ವಕವಾಗಿ ದೇವರಿಗೆ ಶರಣಾದರೆ ಸದ್ಗತಿ ಸಿಗುತ್ತದೆ ಎಂಬ ನಂಬಿಕೆಯಿದೆ.
ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಮಹತ್ವವಿದೆ. ಈ ದಿನ ಕಠಿಣ ಉಪವಾಸ ವ್ರತ ಆಚರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅಲ್ಲದೆ ಆ ದಿನದಂದು ಭಗವಾನ್ ವಿಷ್ಣುವಿಗೆ ಭಕ್ತಿ ಹಾಗೂ ಸಮರ್ಪಣಾ ಭಾವದಿಂದ ಪೂಜೆ ಸಲ್ಲಿಸಲಾಗುತ್ತದೆ.
ಏಕಾದಶಿ ವ್ರತವನ್ನು ಯಾರು ಭಕ್ತಿಯಿಂದ ಆಚರಿಸುತ್ತಾರೋ ಅವರ ಎಲ್ಲಾ ಕಷ್ಟಗಳು ಹಾಗೂ ಸಮಸ್ಯೆಗಳನ್ನು ವಿಷ್ಣು ಪರಿಹಾರ ಮಾಡುತ್ತಾನೆ. ಅದರಲ್ಲೂ ವೈಕುಂಠ ಏಕಾದಶಿ ಸಮಯದಲ್ಲಿ ವಿಷ್ಣುವಿನ ನೆಲೆಯಾದ ವೈಕುಂಠದ ದ್ವಾರಗಳು ತೆರೆಯುತ್ತದೆ. ಈ ವಿಶೇಷ ದಿನದಂದು ವಿಷ್ಣು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ.
ಇಂದು ಎಲ್ಲಾ ಕಡೆ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದೆ. ಇದು ಭಗವಾನ್ ಮಹಾವಿಷ್ಣು ನಿದ್ರೆಯಿಂದ ಎಚ್ಚರವಾಗಿ ಮುಕ್ಕೋಟಿ ದೇವತೆಗಳಿಗೆ ದರ್ಶನ ಕೊಟ್ಟ ಪುಣ್ಯ ದಿನ. ಆದ್ದರಿಂದ ‘ಮುಕ್ಕೋಟಿ ಏಕಾದಶಿ’ ಎಂದೂ ಕರೆಯುತ್ತಾರೆ. ಜೊತೆಗೆ ಇಂದು ಮಹಾವಿಷ್ಣು ‘ಮುರಾ’ ಎಂಬ ರಾಕ್ಷಸನನ್ನು ‘ಏಕಾದಶ’ ಎಂಬ ತನ್ನ ಆಯುಧದಿಂದ ಸಂಹಾರ ಮಾಡಿದ ದಿನ, ಕ್ಷೀರಸಾಗರ ಮಂಥನ ಮಾಡಿ ಅಮೃತ ಉದ್ಭವವಾದ ದಿನ, ಹಾಗೆ ಪಿತಾಮಹ ಬೀಷ್ಮರು ವಿಷ್ಣುಸಹಸ್ರನಾಮವನ್ನು ಬೋಧಿಸಿದ ದಿನವೂ ವೈಕುಂಠ ಏಕಾದಶಿಯಾಗಿದೆ. ಏಕಾದಶಿ ವ್ರತ ಮಾಡುವುದರಿಂದ ಪಿತೃ ದೋಷ ಪರಿಹಾರವಾಗುತ್ತದೆ. ಆದ್ದರಿಂದ ಇದನ್ನು ‘ಮೋಕ್ಷದ’ ಮತ್ತು ಪುತ್ರದಾ ಏಕಾದಶಿ ಎಂದೂ ಕರೆಯುತ್ತಾರೆ.
ಪ್ರತಿ ಏಕಾದಶಿಗಳಿಗಿಂತಲೂ ವೈಕುಂಠ ಏಕಾದಶಿ ವಿಶೇಷವಾದದ್ದು. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದಂದು ಬರುವ ಏಕಾದಶಿ ಅತ್ಯಂತ ವಿಶೇಷವಾದದ್ದು. ಈ ದಿನದಂದು ವೈಕುಂಠ (ವಿಷ್ಣುಲೋಕ, ಸ್ವರ್ಗದ) ಬಾಗಿಲು ತೆರೆದಿರುವ ದಿನ ಎಂಬ ಪ್ರತೀತಿ ಇರುವುದರಿಂದ ಅಂದು ವಿಷ್ಣು/ ವೆಂಕಟೇಶ್ವರ ದೇವಾಲಯ ದರ್ಶನ ಅತ್ಯಂತ ಮಹತ್ವ ಪಡೆದುಕೊಂಡಿದೆ. ಈ ದಿನ ವಿಷ್ಣು ದೇವಾಲಯಳಲ್ಲಿ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ವೈಕುಂಠ ಎಂಬ ಹೆಸರಿನ ಅರ್ಥವೇನು? ‘ಕುಂಠ’ ಎಂದರೆ ಅಸಾಮರ್ಥ್ಯ, ‘ವಿಕುಂಠ’ ಎಂದರೆ ಬದುಕಿನ ನಡೆಯಲ್ಲಿ ಎಂದೂ ಜಾರದವರು, ಅಂದರೆ ಸಾಕ್ಷಾತ್ಕಾರವಾಗಿ ಮುಕ್ತಿ ಪಡೆದವರು ಎಂದರ್ಥ. ಬದುಕಿನಲ್ಲಿ ಎದುರಾಗುವ ಅಸಾಮರ್ಥ್ಯಗಳನ್ನು ಹೋಗಲಾಡಿಸುವವನು ಎಂಬುದು ಈ ಹೆಸರಿಗೆ ಇರುವ ಅರ್ಥವಾಗಿದೆ.
“ಶರೀರಮಾಧ್ಯಂ ಖಲು ಧರ್ಮಸಾಧನಂ” ಎಂಬ ಮಾತಿನಂತೆ ಯಾವುದೇ ಒಳ್ಳೆಯ, ಧಾರ್ಮಿಕ ಕೆಲಸಗಳನ್ನು ಮಾಡಬೇಕಿದ್ದರೂ ಅದಕ್ಕೆ ದೇಹ ಸದೃಢವಾಗಿರುವುದು ಅತ್ಯಗತ್ಯ. ಏಕಾದಶಿವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಮೂಲಕ ಜೀವನದಲ್ಲಿ ಎದುರಾಗುವ ಅಸಾಮರ್ಥ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಬಹುದು, ಈ ಮೂಲಕ ಪರಮಪದವನ್ನು ಸೇರಬಹುದು ಎಂಬುದು ವೈಕುಂಠ ಏಕಾದಶಿಯ ವ್ರತಾಚರಣೆಯ ಗೂಢಾರ್ಥವಾಗಿದೆ.