ತಿರುವನಂತಪುರಂ : ಆಕೆ ಇನ್ನು ಬಾಳಿ ಬದುಕಬೇಕಾದ ಬಾಲೆ ಆದ್ರೆ ವಿಧಿಯಾಟ ಆಕೆಯ ಬದುಕನ್ನೇ ಕರಾಳ ಮಾಡಿದೆ. ಸ್ವತಹ ಬಾಲಕಿಯೇ ಕಳೆದ 5 ವರ್ಷಗಳಲ್ಲಿ 64 ಜನರಿಂದ ತಾನು ಲೈಂಗಿಕ ಶೋಷಣೆಗೆ ಒಳಗಾಗಿರುವುದಾಗಿ ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸಿದ್ದಾಳೆ. ಬಾಲಕಿ ಮೂಲತಃ ಕೇರಳದವಳಾಗಿದ್ದು , ಮಹಿಳಾ ಸಮಕ್ಯ ಎಂಬ ಎನ್‌ಜಿಒ ಸದಸ್ಯರು ತಮ್ಮ ನಿತ್ಯದ ಕ್ಷೇತ್ರ ಭೇಟಿಯ ಭಾಗವಾಗಿ ಬಾಲಕಿಯ ಮನೆಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ.
ಬಳಿಕ ಅವರು ಮಕ್ಕಳ ಕಲ್ಯಾಣ ಸಮಿತಿಗೆ ವರದಿ ನೀಡಿದ್ದಾರೆ. ಸಮಿತಿ ನಡೆಸಿದ ಕೌನ್ಸೆಲಿಂಗ್ ವೇಳೆಯಲ್ಲಿ ತನ್ನ 5 ವರ್ಷಗಳ ಕಾಲ ಅನುಭವಿಸಿದ ಕಷ್ಟವನ್ನು ಬಹಿರಂಗಪಡಿಸಿದ್ದಾಳೆ. ಬಾಲಕಿಯೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಕೌನ್ಸೆಲಿಂಗ್ ಅವಧಿಯಲ್ಲಿ, ಆಕೆ 13 ವರ್ಷದವಳಿದ್ದಾಗ ಮೊದಲ ಬಾರಿ ನೆರೆಹೊರೆಯವರು ಆಕೆಯ ಮೇಲೆ ಲೈಂಗಿಕ ಶೋಷಣೆ ಎಸಗಿದರು. ಜೊತೆಗೆ ಆ ವ್ಯಕ್ತಿ ಆಕೆಯೊಂದಿಗೆ ಅಶ್ಲೀಲ ಚಿತ್ರಗಳನ್ನು ಹಂಚಿಕೊಂಡಿದ್ದ.
ಅಲ್ಲಿಂದ ಪ್ರಾರಂಭವಾಗಿ ಕಳೆದ 5 ವರ್ಷಗಳಿಂದ ತನ್ನ ಮೇಲೆ 64 ಜನರು ಲೈಂಗಿಕ ಶೋಷಣೆ ಎಸಗಿದ್ದಾರೆ. ಪ್ರಕರಣ ಕೂಡ ದಾಖಲಾಗಿದೆ ಎಂದು ತಿಳಿಸಿದ್ದಾಳೆ. ಬಾಲಕಿ ನೀಡಿದ ಹೇಳಿಕೆ ಆಧಾರದ ಮೇಲೆ ಮಕ್ಕಳ ಕಲ್ಯಾಣ ಸಮಿತಿಯವರು ಪತ್ತನಂತಿಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈವರೆಗೂ 10ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಬಾಲಕಿಯ ವಿವರವಾದ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.