ಬೆಂಗಳೂರು: ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಘಟನೆಗೆ ಸಂಬಂಧಿಸಿದಂತೆ ಹಿಂದೂಗಳನ್ನು ಭಯಭೀತರನ್ನಾಗಿ ಮಾಡುವ ಉದ್ದೇಶ ಇದು. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಕರಾಳ ಸಂಕ್ರಾಂತಿ ಆಚರಣೆ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ಪೂಜೆ ಬಹಳ ಪವಿತ್ರ. ಸಂಕ್ರಾಂತಿಗೆ ಸಂಭ್ರಮ ಇರುತ್ತದೆ. ಕಾಂಗ್ರೆಸ್ ಸರ್ಕಾರ ಬಂದಮೇಲೆ ಸಂಕ್ರಾಂತಿಗೆ ಹಸುವಿನ ಕೆಚ್ಚಲು ಕೊಯ್ದಿರೋ ಗಿಫ್ಟ್ ಕೊಟ್ಟಿದ್ದಾರೆ. ಜಿಹಾದಿ ಮನಸ್ಥಿತಿ ಇದು ಎಂದಿದ್ದಾರೆ.
ಹಾಲು ಕೊಡುವ ಹಸುವಿನ ಕೆಚ್ಚಲು ಕೊಯ್ದಿದ್ದಾರೆ. ಹಸುವಿನ ಮಾಲೀಕ ಸ್ಥಳೀಯ ಪಶು ಆಸ್ಪತ್ರೆ ಉಳಿವಿಗಾಗಿ ಹೋರಾಟ ಮಾಡಿದರು. ಹಸುಗಳನ್ನ ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು ಎಂಬುದಕ್ಕೆ ಕಾಲು ಕಟ್ ಮಾಡಿದ್ದಾರೆ. ಕೆಚ್ಚಲಿಗೆ ಹಾನಿ ಮಾಡಿದ್ದಾರೆ. ಕಾಂಗ್ರೆಸ್ ಮಾತೆತ್ತಿದರೆ ದೇವಸ್ಥಾನ, ಹೋಮ ಮಾಡುತ್ತಾರೆ. ಇದು ವೋಟ್‌ಗಾಗಿ ಮಾಡುತ್ತಿರುವುದು ಎಂದರು.
ಸಿಸಿಟಿವಿಗಳನ್ನು ಒಡೆದು ಹಾಕಿದ್ದಾರಂತೆ. ಪಶು ಆಸ್ಪತ್ರೆ ಉಳಿವಿಗಾಗಿ ಹೋರಾಟ ಮಾಡಿದ ಹಸುಗಳ ಮಾಲೀಕರಿಗೆ ಭಯ ಶುರುವಾಗಿದೆ.ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಗೌರವ ಇದೆಯಾ ಇವ್ರಿಗೆ? ಸ್ಥಳೀಯ ಶಾಸಕರು ಬಂದಿಲ್ಲ ಎಂದು ಕಿಡಿಕಾರಿದರು.
ಅಸೆಂಬ್ಲಿಯಲ್ಲಿ ಈ ಬಗ್ಗೆ ಮಾತನಾಡಿದ್ದೆ. ಹಾಗಿದ್ದರೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ವೈಯಕ್ತಿಕವಾಗಿ ನಾನು ಸಹಾಯ ಮಾಡುತ್ತೇನೆ. ಪಶು ಆಸ್ಪತ್ರೆ ವಕ್ಫ್ ಆಸ್ತಿ ಎಂದು ಹೇಳಲಾಗುತ್ತಿದೆ. ಅದನ್ನು ಉಳಿಸಿಕೊಳ್ಳಲು ನಾವು ಹೋರಾಟ ಮಾಡಿದ್ದೆವು. ಕೋಟ್ಯಂತರ ರೂ. ಬೆಲೆ ಬಾಳುವ ಆಸ್ಪತ್ರೆ, ಪಶು ಆಸ್ಪತ್ರೆಯಾಗಿಯೇ ಉಳಿಬೇಕು. ಆದರೆ ಇದನ್ನು ವಕ್ಫ್ ಆಸ್ತಿ ಎಂದು ಹೇಳಲಾಗುತ್ತಿದೆ. ಕೋರ್ಟ್‌ನಲ್ಲಿ ಪ್ರಕರಣ ಇದೆ. ಇದಕ್ಕೆ ನಾವು ತಡೆಯಾಜ್ಞೆ ಕೂಡ ತಂದಿದ್ದೇವೆ. ಅಷ್ಟರಲ್ಲಿ ಹೀಗೆ ಆಗಿದೆ. ಹೋರಾಟಗಾರರಿಗೆ ಭಯ ಪಡಿಸುವ ಕೆಲಸ ಆಗಿದೆ ಎಂದು ಗುಡುಗಿದ್ದಾರೆ.