ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮಂಗಳೂರಿನಲ್ಲಿ ಇಂಧನ ಭದ್ರತಾ ಸಮ್ಮಿಟ್ ಆಯೋಜಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಸಲಹೆ ನೀಡಿದ್ದು, ಇದಕ್ಕೆ ತಮ್ಮ ಕಡೆಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿನ ಸಾಮರ್ಥ್ಯವನ್ನು ಬಳಸಿಕೊಳ್ಳಲು ದೊಡ್ಡ ನಗರಗಳನ್ನು ಮೀರಿ ಇಂಧನ ಭದ್ರತಾ ಶೃಂಗಸಭೆಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಧ್ಯತೆಯ ಬಗ್ಗೆ ಲೇಖಕಿ ಹರ್ಷ ಭಟ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಈ ಭರವಸೆ ನೀಡಿದ್ದಾರೆ. ಮಂಗಳೂರಿನಂತಹ ನಗರದಲ್ಲಿ ಖಂಡಿತವಾಗಿಯೂ ಇಂಧನ ಭದ್ರತಾ ಸಮಿಟ್ ಮಾಡಬಹುದು. ನನ್ನ ಸ್ನೇಹಿತ ಮತ್ತು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಿನ್ನೆ ಈ ಭಾಗದ ಎಲ್ಲಾ ತೈಲ ಮಾರಾಟ ಕಂಪೆನಿಗಳ ಪ್ರಮುಖರನ್ನು ಭೇಟಿ ಮಾಡಿಸಿದ್ದಾರೆ.
ಒಂದು ವೇಳೆ ನೀವು ಇಲ್ಲಿ ಇಂಧನ ಭದ್ರತಾ ಕಾರ್ಯಕ್ರಮವನ್ನು ಆಯೋಜಿಸಲು ಬಯಸಿದರೆ, ಈ ತೈಲ ಕಂಪನಿಗಳೊಂದಿಗೆ ಮಾತನಾಡಬಹುದು. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿರುತ್ತದೆ. ಭಾರತ ಇಂಧನ ಸಪ್ತಾಹದ ಜತೆಗೆ ಇಂಥ ಇಂಧನ ಭದ್ರತಾ ಸಮ್ಮೇಳನಗಳನ್ನು ಆಯೋಜಿಸುವುದರಿಂದ ಹೆಚ್ಚಿನ ತೈಲೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ, ಅನುಕೂಲತೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಇಂಧನ ಸಪ್ತಾಹಕ್ಕೆ ಆಹ್ವಾನ” ಮೊತ್ತ ಮೊದಲ ಭಾರತ ಇಂಧನ ಸಪ್ತಾಹವನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದು ಬಳಿಕ ಗೋವಾದಲ್ಲಿ ನಡೆಸಿದ್ದೆವು. ನಂತರ ಗೋವಾವನ್ನು ಇಂಡಿಯಾ ಎನರ್ಜಿ ವೀಕ್ (ಐಇಡಬ್ಲ್ಯು) ಗಾಗಿ ಶಾಶ್ವತ ಸ್ಥಳವಾಗಿ ಆಯ್ಕೆ ಮಾಡಿ ಅಲ್ಲಿ ಸವಲತ್ತುಗಳನ್ನು ಒದಗಿಸುತ್ತಿದ್ದೇವೆ. ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ ಲಿಮಿಟೆಡ್ (ಒಎನ್‌ಜಿಸಿ) ಗೋವಾದಲ್ಲಿ 240 ಎಕರೆ ಭೂಮಿಯನ್ನು ಹೊಂದಿದ್ದು, ದೆಹಲಿಯಲ್ಲಿರುವ ಭಾರತ್ ಮಂಗಳಂ ಅಥವಾ ಯಶೋ ಭೂಮಿಯಂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಿದರೆ ಮುಂದೆ ಜಾಗತಿಕ ಮಟ್ಟದ ಸಂಸ್ಥೆಗಳು ಇಲ್ಲಿ ತಮ್ಮ ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯವಾಗಲಿದೆ ಎಂದರು.
ದೆಹಲಿಯಲ್ಲಿ ಇಂಡಿಯಾ ಎನರ್ಜಿ ವೀಕ್ ಆಯೋಜಿಸಿದ್ದ ವೇಳೆ ಈ ರೀತಿಯ ವಸ್ತುಪ್ರದರ್ಶನವನ್ನು ಯುವಜನತೆ ನೋಡಬೇಕು ಎನ್ನುವ ಸಲಹೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿದ್ದರು. ಹೀಗಾಗಿ, ಮೋದಿ ಅವರ ಸಲಹೆಯಂತೆ ಈ ಬಾರಿಯ ಇಂಡಿಯಾ ಎನರ್ಜಿ ವೀಕ್ ನಲ್ಲಿ ಪ್ರತಿದಿನವೂ ಯುವ ಸಮುದಾಯ ಸೇರಿದಂತೆ ಎಲ್ಲ ಸಾರ್ವಜನಿಕರು ಕೂಡ ಮುಕ್ತವಾಗಿ ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಲಾಗುವುದು. ಒಂದು ತಿಂಗಳ ಕಾಲ ನಡೆಯುವ ಈ ಇಂಡಿಯಾ ಎನರ್ಜಿ ವೀಕ್ ಶೀಘ್ರದಲ್ಲೇ ಶುರುವಾಗಲಿದೆ ಎಂದು ಸಚಿವರು ತಿಳಿಸಿದರು. ದೇಶದಲ್ಲಿ ಮೂರು ವರ್ಷಗಳ ಹಿಂದೆಯಷ್ಟೇ ಇಂಡಿಯಾ ಇಂಧನ ಸಪ್ತಾಹ ಪಾರಂಭಿಸಲಾಗಿದೆ.
ಆದರೆ, ಪ್ರಸ್ತುತ ಇದು ವಿಶ್ವದಲ್ಲೇ ಅತಿದೊಡ್ಡ ಇಂಧನ ವಸ್ತು ಪ್ರದರ್ಶನವಾಗಿ ಬದಲಾಗಿದೆ. ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ತಂತ್ರಜ್ಞಾನ, ಸಲಕರಣೆಗಳು ಈ ಇಂಡಿಯಾ ಇಂಧನ ವೀಕ್ ನಲ್ಲಿ ಪ್ರದರ್ಶನಗೊಳ್ಳಲಿದ್ದು, ಸ್ಟಾರ್ಟಪ್ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ, ಮಾರ್ಗದರ್ಶನ ಪಡೆಯುವುದಕ್ಕೆ ಉತ್ತಮ ವೇದಿಕೆಯಾಗಿದೆ. ಹೀಗಾಗಿ, ಎಲ್ಲ ಯುವಜನರು ಕೂಡ ಈ ಇಂಡಿಯಾ ಎನರ್ಜಿ ವೀಕ್ ಗೆ ಭೇಟಿ ನೀಡಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಕರೆ ನೀಡಿದ್ದಾರೆ.