ರಾಜ್ಯ ಬಿಜೆಪಿಯಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ನಡುವೆಯೇ ಇದೀಗ ಪಕ್ಷಕ್ಕೆ ದೊಡ್ಡ ಅಘಾತ ಎದುರಾಗಿದೆ. ಹಾಸನದ ಮಾಜಿ ಶಾಸಕ ಪ್ರೀತಂ ಜೆ ಗೌಡ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಮಾಜಿ ಆಪ್ತರ ಮೂಲದಿಂದ ತಿಳಿದು ಬಂದಿದೆ.
ಬಿಜೆಪಿಯ ಯುವ ಮುಖಂಡರಲ್ಲಿ ಒಬ್ಬರಾಗಿರುವ ಹಾಗೂ ಕರ್ನಾಟಕ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರೀತಂ ಜೆ ಗೌಡ ಚಾಲ್ತಿಯಲ್ಲಿರುವ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ಸರಿಯಾದ ಯಾವುದೇ ಭವಿಷ್ಯವಿಲ್ಲ ಎಂದು ಕ್ರಮೇಣ ಪಕ್ಷದಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಹೇಳಲಾಗಿದೆ.ಇನ್ನು ಪ್ರೀತಂ ಗೌಡ ಬಿಜೆಪಿ ಪಕ್ಷ ತೊರೆಯಲು ಸಿದ್ಧರಾಗಿರುವುದಕ್ಕೆ ಸಾಕ್ಷಿ ಎನ್ನುವಂತೆ ಇತ್ತೀಚಿಗೆ ಪ್ರೀತಂ ಗೌಡ ಬಿಜೆಪಿಯ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ. ಹಾಗೂ ಬಿಜೆಪಿಗೆ ಸಂಬಂಧಪಟ್ಟ ವೇದಿಕೆಗಳಲ್ಲಿಯೂ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಪಕ್ಷವನ್ನೂ ಹೊರತು ಪಡಿಸಿ ತನ್ನದೇ ಆದ ಕಾರ್ಯಕರ್ತರ ಬಲ ಹಾಗೂ ಸಂಘಟನೆ ಹೊಂದಿರುವ ಪ್ರೀತಂ ಗೌಡ ಸದ್ಯ ಪಕ್ಷಾಂತರಕ್ಕೆ ಸಜ್ಜಾದ ಬಗ್ಗೆ ಮಾತುಗಳು ಜೋರಾಗಿಯೇ ಕೇಳಿಬರುತ್ತಿದೆ.