ಅಮರಾವತಿ: ತಿರುಪತಿಯಲ್ಲಿ ಕಾಲ್ತುಳಿತದಿಂದಾಗಿ 6 ಮಂದಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ಅವಘಡ ನಡೆದಿದೆ. ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿಯ ಅತಿಥಿಗೃಹದಲ್ಲಿ 1ನೇ ಮಹಡಿ ಮೇಲಿಂದ ಬಿದ್ದು 3 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗುರುವಾರ ಸಂಜೆ ನಿಗದಿಯಾಗಿದ್ದ, ದೇವರ ದರ್ಶನಕ್ಕಾಗಿ ಪೋಷಕರೊಂದಿಗೆ ದೇವಸ್ಥಾನಕ್ಕೆ ಬಾಲಕ ಬಂದಿದ್ದ. ಆದರೆ ಮಧ್ಯಾಹ್ನ 3:30 ರ ಸುಮಾರಿಗೆ ತನ್ನ ಸಹೋದರನೊಂದಿಗೆ ಬಾಲಕ ಆಟವಾಡುತ್ತಿದ್ದ ವೇಳೆ ಬಾಲಕ ಆಕಸ್ಮಿಕವಾಗಿ ಮೂರನೇ ಸಂಖ್ಯೆಯ ವರಾಂಡಾ ಬಳಿಯ ಪದ್ಮನಾಭ ನಿಲಯದಲ್ಲಿ ಮೆಟ್ಟಿಲುಗಳ ಗ್ರಿಲ್ ಮೂಲಕ ಇದ್ದಕ್ಕಿದ್ದಂತೆ ಜಾರಿ ಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.