ಬೆಂಗಳೂರು : ಕರ್ನಾಟಕ ಕಾಂಗ್ರೆಸ್ನಲ್ಲಿ ಮತ್ತೆ ನಾಯಕತ್ವ ಬದಲಾವಣೆ ವಿಚಾರವಾಗಿ ಬಹಳ ಸದ್ದು ಮಾಡುತ್ತಿದೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್ ಅವರು, ಅಧ್ಯಕ್ಷ ಸ್ಥಾನದ ವಿಚಾರ ಸ್ಪಷ್ಟಪಡಿಸಬೇಕಾಗಿರುವುದು ನಾನಲ್ಲ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಲಿ. ಇವರು (ಅಹಿಂದ ನಾಯಕರು) ಪ್ರಶ್ನೆ ಮಾಡುತ್ತಿರುವುದು ನನ್ನನ್ನಲ್ಲ, ಖರ್ಗೆ ಅವರನ್ನು ಎಂದು ಹೇಳಿದರು.
ಯಾವುದಾದರೂ ವಿಚಾರ ಇದ್ದರೆ ನಾನೇ ಮಾಧ್ಯಮವರಿಗೆ ತಿಳಿಸುತ್ತೇನೆ. ಯಾರೂ ಕೂಡ ಬಹಿರಂಗವಾಗಿ ಮಾತನಾಡಬಾರದು ಎಂದಿದ್ದಾರೆ. ರಣದೀಪ್ ಸಿಂಗ್ ಸುರ್ಜೇವಾಲ ಸಹ ಬೆಳಗಾವಿಗೆ ಬರುತ್ತಿದ್ದಾರೆ. ಏನಾದರೂ ಇದ್ದರೆ ರಾಹುಲ್ ಗಾಂಧಿ, ಖರ್ಗೆ ಜತೆ ಮಾತನಾಡಲಿ. ಅವರವರ ಶ್ರಮಕ್ಕೆ ತಕ್ಕ ಸ್ಥಾನವನ್ನು ನಾಯಕರು ಕೊಡುತ್ತಾರೆ. ಶ್ರಮಪಟ್ಟು ನಾನು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಲ್ಲ, ಕಾರ್ಯಕರ್ತರು ತಂದಿದ್ದು. ನಮ್ರತೆಯಿಂದ ಮನವಿ ಮಾಡ್ತೇನೆ, ಕಾಂಗ್ರೆಸ್ ಎಂಬುದು ಕಾರ್ಯಕರ್ತರ ಪಕ್ಷ ಎಂದು ಡಿಕೆ ಶಿವಕುಮಾರ್ ಹೇಳಿದರು.
ಮಹಾತ್ಮ ಗಾಂಧಿಯೇ ಎಲ್ಲವನ್ನೂ ತ್ಯಾಗ ಮಾಡಿದರು. ಅವರು ಮನಸ್ಸು ಮಾಡಿದ್ದರೆ ಪ್ರಧಾನಿ ಆಗುತ್ತಿರಲಿಲ್ಲವೇ ಎಂದು ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದರು.