ಬೆಂಗಳೂರು : ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಎರಡು ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಿದ್ದಾರೆ ಮತ್ತು ಕೆಪಿಸಿಸಿ ಅಧ್ಯಕ್ಷನ ಜವಾಬ್ದಾರಿಯೂ ಅವರ ಮೇಲಿದೆ. ಎಲ್ಲವನ್ನು ಸಮರ್ಥವಾಗಿ ನಿಭಾಯಿಸುವುದು ಕಷ್ಟವಾಗುತ್ತದೆ. ನಾನು ಹಿಂದೆ ಅಧ್ಯಕ್ಷ ಸ್ಥಾನಕ್ಕಾಗಿ ಸಚಿವ ಸ್ಥಾನವನ್ನು ಬಿಟ್ಟುಕೊಟ್ಟಿದ್ದೆ ಎಂದು ಹೇಳಿಕೆ ನೀಡುವ ಮೂಲಕ ಒಂದು ಒಂದು ಹುದ್ದೆಯ ಪರ ಗೃಹ ಸಚಿವ ಜಿ.ಪರಮೇಶ್ವರ್ ಬ್ಯಾಟ್ ಬೀಸಿದ್ದಾರೆ.
ಸದ್ಯ ಕಾಂಗ್ರೆಸ್‌ನಲ್ಲಿ ತಾರಕಕ್ಕೇರಿದ ಅಧ್ಯಕ್ಷ ಪಟ್ಟ ಫೈಟ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಇಂತಹ ಪರಿಸ್ಥಿತಿ ಎದುರಾಗಿತ್ತು. ಅಂದು ನನಗೆ ಮಂತ್ರಿ ಅಥವಾ ಅಧ್ಯಕ್ಷಗಿರಿ ಪೈಕಿ ಒಂದು ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದರು. ನಾನು ಅಧ್ಯಕ್ಷ ಸ್ಥಾನವನ್ನು ಆಯ್ಕೆ ಮಾಡಿದ್ದೆ. ಈಗ ಶಿವಕುಮಾರ್ ಡಿಸಿಎಂ ಮತ್ತು ಅಧ್ಯಕ್ಷರಾಗಿದ್ದಾರೆ. ಪಕ್ಷ ಸಂಘಟಿಸುವ ದೊಡ್ಡ ಜವಾಬ್ದಾರಿ ಸಹ ಇದೆ. ಹೈಕಮಾಂಡ್‌ನವರು ಏನು ತೀರ್ಮಾನ ಮಾಡ್ತಾರೋ ನೋಡಬೇಕು ಎಂದರು.
ಎರಡು ಹುದ್ದೆಯಲ್ಲಿರುವ ಕಾರಣ ಸಹಜವಾಗಿ ಅಧ್ಯಕ್ಷ ಸ್ಥಾನ ಬದಲಾಯಿಸಿ ಅಂತ ಬೇರೆಯವರು ಕೇಳುತ್ತಾರೆ. ನಾನು ಅಧ್ಯಕ್ಷ ಇದ್ದಾಗಲೂ ಬದಲಾಯಿಸಿ ಅಂತ ಹೇಳಿದ್ದರು. ನಾವು ಒಂದು ಸಮುದಾಯ ಸೇರಿ ಸಭೆ ಮಾಡುತ್ತೇವೆ ಎಂದಿದ್ದನ್ನು ಹೈಕಮಾಂಡ್ ಗಮನಿಸಿದೆ. ಹಾಗೆಯೇ ಪಕ್ಷ ಸಂಘಟನೆ ಆಗುತ್ತಿದ್ಯಾ ಇಲ್ವೋ ಎಂಬುದನ್ನು ಹೈಕಮಾಂಡ್ ನಾಯಕರು ಗಮನಿಸುತ್ತಾರೆ ಎಂದು ತಿಳಿಸಿದರು.