ನವದೆಹಲಿ : ದೇಶದ 32 ಕ್ರೀಡಾಪಟುಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದ್ದಾರೆ.
ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಶೂಟರ್ ಮನು ಭಾಕರ್, ವಿಶ್ವ ಚೆಸ್ ಚಾಂಪಿಯನ್ ಡಿ. ಗುಕೇಶ್, ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಮತ್ತು ಪುರುಷರ ಹಾಕಿ ನಾಯಕ ಹರ್ಮನ್ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಹೈ ಜಂಪರ್ ಪ್ರವೀಣ್ ಕುಮಾರ್ ಅವರಿಗೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು, ಒಂದೇ ಒಲಿಂಪಿಕ್ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಮನು ಪಾತ್ರರಾದರು. ಟೋಕಿಯೊ ಮತ್ತು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕಗಳನ್ನು ಗೆದ್ದ ಭಾರತೀಯ ಪುರುಷರ ಹಾಕಿ ತಂಡದ ಪ್ರಮುಖ ಸದಸ್ಯರಾಗಿದ್ದರು.
ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರವೀಣ್, ಕಳೆದ ವರ್ಷ ಪ್ಯಾರಿಸ್ನಲ್ಲಿ ತಮ್ಮ ಸಾಧನೆಯನ್ನು ಚಿನ್ನಕ್ಕೆ ಏರಿಸಿದರು. ಗುಕೇಶ್ 2024ರ ಡಿಸೆಂಬರ್ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿಶ್ವನಾಥನ್ ಆನಂದ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೆಪ್ಟೆಂಬರ್ನಲ್ಲಿ ನಡೆದ ಚೆಸ್ ಒಲಿಂಪಿಯಾಡ್ನಲ್ಲಿ ನಡೆದ ಪುರುಷರ ತಂಡದ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ಗಳಿಸುವಲ್ಲಿ ಗುಕೇಶ್ ಪ್ರಮುಖ ಪಾತ್ರ ವಹಿಸಿದ್ದರು. ಮೂವತ್ತೆರಡು ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು, ಅವರಲ್ಲಿ 17 ಮಂದಿ ಪ್ಯಾರಾ-ಕ್ರೀಡಾಪಟುಗಳಾಗಿದ್ದರು.
ಅರ್ಜುನ ಪ್ರಶಸ್ತಿ ವಿಜೇತರಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತರಾದ ಕುಸ್ತಿಪಟು ಅಮನ್ ಸೆಹ್ರಾವತ್ ಮತ್ತು ಶೂಟರ್ಗಳಾದ ಸ್ವಪ್ನಿಲ್ ಕುಸಲೆ ಮತ್ತು ಸರಬ್ಜೋತ್ ಸಿಂಗ್, ಪುರುಷರ ಹಾಕಿ ತಂಡದ ಸದಸ್ಯರಾದ ಜರ್ಮಾನ್ ಪ್ರೀತ್ ಸಿಂಗ್, ಸುಖ್ಜೀತ್ ಸಿಂಗ್, ಸಂಜಯ್ ಮತ್ತು ಅಭಿಷೇಕ್ ಸೇರಿದ್ದಾರೆ. ಭಾರತದ ಪ್ಯಾರಾ-ಕ್ರೀಡಾಪಟುಗಳು ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು 13 ಕಂಚು ಸೇರಿದಂತೆ 29 ಪದಕಗಳೊಂದಿಗೆ ಮರಳಿದರು. ಭಾರತದ ಮೊದಲ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಮುರಳಿಕಾಂತ್ ಪೇಟ್ಕರ್ ಅವರಿಗೆ ಅರ್ಜುನ ಪ್ರಶಸ್ತಿ (ಜೀವಮಾನ ಸಾಧನೆ) ನೀಡಲಾಯಿತು.
ಖೇಲ್ ರತ್ನ ಪ್ರಶಸ್ತಿಗೆ 25 ಲಕ್ಷ ರೂಪಾಯಿ ನಗದು, ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗೆ 15 ಲಕ್ಷ ರೂಪಾಯಿ ನಗದು ಬಹುಮಾನವಿದೆ. ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ಷಿಪ್ಗಳಲ್ಲಿನ ಪ್ರದರ್ಶನಗಳಿಗೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ಅಂಕ-ಆಧಾರಿತ ವ್ಯವಸ್ಥೆಯನ್ನು ಬಳಸಿಕೊಂಡು ಗೌರವಗಳನ್ನು ನಿರ್ಧರಿಸಲಾಯಿತು.