ಸಂವಿಧಾನದ ಪ್ರಕಾರ ಮಹಿಳೆಯರು ಹೊಂದಿರುವಂತಹ ವಿವಿಧ ಹಕ್ಕುಗಳಿಗೆ ರಕ್ಷಣೆಯನ್ನು ನೀಡುವ ಸಲುವಾಗಿ ಕೇಂದ್ರ ಸರಕಾರವು 13-09-2005ರಿಂದ ದೇಶಾದ್ಯಂತ ಜಾರಿಗೆ ಬರುವಂತೆ ‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005’ (Protection of Women from Domestic Violence Act, 2005) ಎಂಬ ವಿಶೇಷ ಕಾನೂನನ್ನು ಜ್ಯಾರಿಗೆ ತಂದಿರುತ್ತದೆ.
ಈ ಕಾಯ್ದೆಯ ಪ್ರಕಾರ ಯಾವುದೇ ವಿವಾಹಿತ ಮಹಿಳೆ ಆಕೆಯ ಗಂಡ ಅಥವಾ ಗಂಡನ ಸಂಬಂಧಿಕರೊಂದಿಗೆ ಒಟ್ಟಿಗೆ ಕೌಟುಂಬಿಕ ಮನೆಯಲ್ಲಿ (ಶೇರ್ಡ್ ಹೌಸ್ ಹೋಲ್ಡ್) ವಾಸವಾಗಿರುವಂತಹ ಸಂದರ್ಭದಲ್ಲಿ ಆಕೆಯ ಗಂಡ ಅಥವಾ ಗಂಡನ ಸಂಬಂಧಿಕರು ನೇರವಾಗಿ ಅಥವಾ ಪರೋಕ್ಷವಾಗಿ ಆಕೆಗೆ ಮಾನಸಿಕ, ದೈಹಿಕ ಅಥವಾ ಆರ್ಥಿಕ ಹಿಂಸೆ ಅಥವಾ ಕಿರುಕುಳ ನೀಡಿದ ಸಂದರ್ಭದಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005ರ 12ನೇ ಕಲಂ (Section) ಪ್ರಕಾರ ಸಮ್ಮಂದಪಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನೇರವಾಗಿ ಅಥವಾ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನಾಧಿಕಾರಿಯವರ ಮುಖಾಂತರ ಅಥವಾ ಸರಕಾರದಿಂದ ಮಾನ್ಯತೆ ಹೊಂದಿರುವ ಯಾವುದೇ ಸಮಾಜ ಸೇವಾ ಸಂಸ್ಥೆ ಮುಖಾಂತರವಾಗಲೀ ಆಕೆಯ ವಿರುದ್ಧ ನಡೆಸಿದ ಅಥವಾ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಲಿಖಿತ ದೂರನ್ನು ನೀಡಿ ಸೂಕ್ತ ರಕ್ಷಣೆ ಮತ್ತು ದೌರ್ಜನ್ಯದಿಂದ ಆಕೆಗೆ ಉಂಟಾದ ಯಾವುದೇ ರೀತಿಯ ನಷ್ಟ ಮತ್ತು ತೊಂದರೆಗಳಿಗೆ ಸೂಕ್ತ ಪರಿಹಾರವನ್ನು ಕೇಳಿ ಪಡೆಯಲು ಹಕ್ಕುಳ್ಳವಳಾಗಿರುತ್ತಾಳೆ. ಮಾತ್ರವಲ್ಲದೇ ದೌರ್ಜನ್ಯದಿಂದ ತನಗೆ ಮಾನಸಿಕ, ಭಾವನಾತ್ಮಕ, ದೈಹಿಕ ಮತ್ತು ಆರ್ಥಿಕ ಒತ್ತಡ ಉಂಟಾಗಿದ್ದರೆ ಆಕೆ ದೌರ್ಜನ್ಯ ನೀಡಿದವರ ವಿರುದ್ಧ ಸೂಕ್ತ ಪರಿಹಾರವನ್ನು ಕೇಳಬಹುದು.
ಒಂದು ಕುಟುಂಬ ವ್ಯವಸ್ಥೆಯಲ್ಲಿ ಮದುವೆಯ ನಂತರ ವಿಧಿಸಮ್ಮತ (Section) ವಿವಾಹವಾಗಿರುವ ಅಥವಾ ವಿಧಿಸಮ್ಮತವಲ್ಲದ (Live-in-relationship) ಮಹಿಳೆಯ ವಿರುದ್ಧ ಆಕೆಯ ಪತಿ ಅಥವಾ ಪತಿಯ ಸಂಬಂಧಿಕರು ಒಟ್ಟಿಗೆ ವಾಸವಾಗಿರುವ ಸಂದರ್ಭದಲ್ಲಿ ಆಕೆಗೆ ದೈಹಿಕವಾಗಿ ಅಥವಾ ಚುಚ್ಚು ಮಾತಿನ ಮೂಲಕ ಅಥವಾ ಭಾವನಾತ್ಮಕವಾಗಿ ಅಥವಾ ಆರ್ಥಿಕವಾಗಿ ಅಥವಾ ಧಾರ್ಮಿಕವಾಗಿ ಅಥವಾ ಲೈಂಗಿಕವಾಗಿ ನೇರವಾಗಿ ಅಥವಾ ಪರೋಕ್ಷವಾಗಿ ನೀಡುವ ದೌರ್ಜನ್ಯವನ್ನು ‘ಕೌಟುಂಬಿಕ ದೌರ್ಜನ್ಯ’ ಎಂತ ಪರಿಗಣಿಸಲಾಗುತ್ತದೆ. ಈ ರೀತಿಯ ಕೌಟುಂಬಿಕ ದೌರ್ಜನ್ಯದ ದೂರಿನ ವಿರುದ್ಧ ನಡೆಸುವ ತನಿಕೆಯನ್ನು ಸಂಬಂಧಪಟ್ಟ ನ್ಯಾಯಾಧೀಶರು ಸಂದರ್ಭಕ್ಕನುಸಾರವಾಗಿ ಅಗತ್ಯವೆಂತ ಕಂಡುಬಂದಲ್ಲಿ ‘ಗೌಪ್ಯ ವಿಚಾರಣೆ’ (In Camera proceedings) ಮೂಲಕ ದೂರು ನೀಡಿದ ಮಹಿಳೆ ಮತ್ತು ದೂರಿನಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳ ಸಮಕ್ಷಮ ತನಿಖೆ ನಡೆಸಲು ಅವಕಾಶವಿದೆ.
ದೌರ್ಜನ್ಯಕ್ಕೊಳಗಾದ ಮಹಿಳೆ ತಾನು ವಾಸ ಮಾಡುತ್ತಿರುವ ಕೌಟುಂಬಿಕ ಮನೆಯಿಂದ (ಶೇರ್ಡ್ ಹೌಸ್ ಹೋಲ್ಡ್) ಆಕೆಯ ಪತಿ ಅಥವಾ ಪತಿಯ ಸಂಬಂಧಿಕರು ಹೊರದಬ್ಬುವ ಸಂದರ್ಭದಲ್ಲಿ ಸೂಕ್ತ ರಕ್ಷಣೆ, ಅಥವಾ ಆಕೆ ತಾನು ವಾಸ ಮಾಡುತ್ತಿರುವ ಮನೆಗೆ ಅಥವಾ ನೌಕರಿ ಮಾಡುತ್ತಿರುವ ಕಛೇರಿಗೆ, ಆಕೆಯ ಪತಿ ಅಥವಾ ಪತಿಯ ಸಂಬಂಧಿಕರು ಆತಳ ಇಚ್ಚೆಗೆ ವಿರುದ್ಧವಾಗಿ ಪ್ರವೇಶ ಮಾಡದಂತೆ ಮತ್ತು ಯಾವುದೇ ರೀತಿಯ ತೊಂದರೆ ಅಥವಾ ಕಿರುಕುಳ ನೀಡದಂತೆ, ಆಕೆಯ ವೈಯುಕ್ತಿಕ ವಿಚಾರಗಳ ಅಂದರೆ ವಿದ್ಯುಜ್ಜನಿತ ಸಾಧನ ಅಂದರೆ ಮೊಬೈಲ್, ಟೆಲಿಫೋನ್ ಮೂಲಕ ತನ್ನ ಸಂಬಧಿಕರೊಂದಿಗೆ ಅಥವಾ ಸ್ನೇಹಿತರೊಂದಿಗೆ ನಡೆಸುವ ಸಂಭಾಷಣೆ ವಿಚಾರಗಳ ಕುರಿತು ಹಸ್ತಕ್ಷೇಪ ನಡೆಸಿ ಆಕೆಗೆ ತೊಂದರೆ ನೀಡದಂತೆ ಅಥವಾ ಆಕೆ ತನ್ನ ಸ್ವಂತ ಹೆಸರಿನಲ್ಲಿ ಅಥವಾ ತನ್ನ ಗಂಡನೊಂದಿಗೆ ಜಂಟಿಯಾಗಿ ಹೊಂದಿರುವ ಯಾವುದೇ ಆಸ್ತಿ ಅಥವಾ ಸೊತ್ತನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಮಾರಾಟ ಅಥವಾ ಪರಾಭಾರೆ ಮಾಡದಂತೆ ಮತ್ತು ಆಕೆ ತಾನು ಸ್ವತಂತ್ರವಾಗಿ, ಶಾಂತಿಯುತವಾಗಿ ಮತ್ತು ನೆಮ್ಮದಿಯಿಂದ ಜೀವಿಸಲು ಹೊಂದಿರುವ ಹಕ್ಕಿಗೆ ಯಾವುದೇ ರೀತಿಯಲ್ಲಿ ಅಡ್ಡಿ ಅಥವಾ ಆಕ್ಷೇಪ ಉಂಟುಮಾಡದಂತೆ ಸೂಕ್ತ ‘ರಕ್ಷಣಾ ಆದೇಶ’ ವನ್ನು ಸಮ್ಮಂದಪಟ್ಟ ನ್ಯಾಯಾಧೀಶರಿಂದ ಪಡೆಯುವ ಹಕ್ಕನ್ನು ಹೊಂದಿರುತ್ತಾಳೆ. ಮಾತ್ರವಲ್ಲದೆ ಒಂದು ವೇಳೆ ಆಕೆ ತನ್ನ ಗಂಡನ ಅಥವಾ ಗಂಡನೊಂದಿಗೆ ವಾಸವಿರುವ ಆತನ ಸಂಬಂಧಿಕರ ದೌರ್ಜನ್ಯ ಅಥವಾ ಕಿರುಕುಳದಿಂದಾಗಿ ತನ್ನ ಗಂಡನ ಮನೆಯಲ್ಲಿ ನೆಮ್ಮದಿ ಮತ್ತು ಸುರಕ್ಷಿತವಾಗಿ ವಾಸ ಮಾಡಲು ಅಸಾಧ್ಯವೆಂತ ರುಜುವಾತು ಪಡಿಸಿದಲ್ಲಿ ಆಕೆಗೆ ಪ್ರತ್ಯೇಕವಾಗಿ ವಾಸ ಮಾಡಲು ಒಂದು ಪ್ರತ್ಯೇಕವಾದ ಮನೆ ಅಥವಾ ವಾಸ್ತವ್ಯದ ವ್ಯವಸ್ಥೆಯನ್ನು ಮಾಡಿಕೊಡುವಂತೆ ಆಕೆಯ ಗಂಡನಿಗೆ ಸೂಕ್ತ ನಿರ್ಧೇಶನ ನೀಡುವ ಅಧಿಕಾರವನ್ನು ನ್ಯಾಯಾಧೀಶರು ಹೊಂದಿರುತ್ತಾರೆ. ಇದಲ್ಲದೇ ಆಕೆಯ ಮತ್ತು ಆಕೆಯ ಮಕ್ಕಳ ಪಾಲನೆ ಪೋಷಣೆ ಬಗ್ಗೆ ಮಾಸಿಕ ಅಥವಾ ಏಕಗಂಟಿನ ಜೀವನಾಂಶವನ್ನು ಮತ್ತು ಆಕೆಗೆ ಉಂಟಾದ ಕಷ್ಟ ಮತ್ತು ನಷ್ಟದ ಪರಿಹಾರ ಬಾಬ್ತು ಸೂಕ್ತ ಮೊತ್ತವನ್ನು ಆಕೆಯ ಗಂಡನಿಂದ ಅಥವಾ ದೌರ್ಜನ್ಯ ನಡೆಸಿದ ಗಂಡನ ಸಂಬಂಧಿಕರಿಂದ ಕೊಡಿಸುವ ಮತ್ತು ಆಕೆಯ ವಿರುದ್ಧ ದೌರ್ಜನ್ಯ ನಡೆಸಿದವರಿಗೆ ಸೂಕ್ತ ಶಿಕ್ಷೆಯನ್ನು ನೀಡುವ ಅಥವಾ ದಂಢ ವಿಧಿಸುವ ಅಧಿಕಾರವನ್ನು ಸಮ್ಮಂದಪಟ್ಟ ನ್ಯಾಯಾಧೀಶರು ಹೊಂದಿರುತ್ತಾರೆ.