ನಟ ಕಿಚ್ಚ ಸುದೀಪ್ ಅಭಿನಯಕ್ಕೆ ರಾಜ್ಯ ಚಲನಚಿತ್ರ ಅತ್ಯುತ್ತಮ ನಟ ಎಂಬ ಪ್ರಶಸ್ತಿ ನೀಡಲಾಗಿತ್ತು. ಆದರೆ ನಟ ಸುದೀಪ್ ಈ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.
‘ಪೈಲ್ವಾನ್’ ಚಿತ್ರದ ಅಭಿನಯಕ್ಕಾಗಿ ಕಿಚ್ಚ ಸುದೀಪ್ ಅವರಿಗೆ ರಾಜ್ಯ ಸರ್ಕಾರವು ಅತ್ಯುತ್ತಮ ನಟ ಪ್ರಶಸ್ತಿಯನ್ನು ಘೋಷಿಸಿತ್ತು. ಸುದೀಪ್ ಈ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಪ್ರಶಸ್ತಿಗೆ ತಮ್ಮನ್ನು ಪರಿಗಣಿಸಿರುವುದಕ್ಕೆ ಧನ್ಯವಾದಗಳನ್ನು ಸೂಚಿಸುತ್ತಲೇ, ಚಿತ್ರರಂಗದಲ್ಲಿ ಸಾಕಷ್ಟು ಅರ್ಹರು ಇರುವುದರಿಂದ ಅವರಿಗೆ ಕೊಡಬೇಕೆಂದು ಹೇಳಿದ್ದಾರೆ.
ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿರುವ ಸುದೀಪ್, ‘ರಾಜ್ಯ ಸರ್ಕಾರದ ಅತ್ಯುತ್ತಮ ನಟ ಪ್ರಶಸ್ತಿಗೆ ನನ್ನ ಹೆಸರನ್ನು ಪರಿಗಣಿಸಿದ್ದಕ್ಕೆ ಧನ್ಯವಾದಗಳು. ಆದರೆ, ವೈಯಕ್ತಿಕ ಕಾರಣಾಂತರಗಳಿಂದ ನಾನು ಕಳೆದ ಕೆಲವು ವರ್ಷಗಳಿಂದ ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ಬಿಟ್ಟಿದ್ದೇನೆ. ಈ ನಿರ್ಧಾರದಿಂದ ಸರಿಯುವುದಕ್ಕೆ ನನಗೆ ಇಷ್ಟವಿಲ್ಲ. ಚಿತ್ರರಂಗದಲ್ಲಿ ಹಲವು ಪ್ರತಿಭಾವಂತ ಮತ್ತು ಅರ್ಹ ಕಲಾವಿದರಿದ್ದಾರೆ. ಅವರಿಗೆ ಪ್ರಶಸ್ತಿ ಬರುವುದನ್ನು ನಾನು ಸಂತೋಷಪುಡತ್ತೇನೆ’ ಎಂದು ಸುದೀಪ್ ಹೇಳಿದ್ದಾರೆ.
ಯಾವುದೇ ಪ್ರಶಸ್ತಿಯ ಆಸೆ ಇಲ್ಲದೆ, ಪ್ರೇಕ್ಷಕರನ್ನು ಮನರಂಜಿಸುವುದಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿಕೊಂಡಿರುವ ಅವರು, ‘ಆಯ್ಕೆ ಸಮಿತಿ ಈ ಪ್ರಶಸ್ತಿಗೆ ನನ್ನನ್ನು ಪರಿಗಣಿಸಿದ್ದು ಇನ್ನಷ್ಟು ಉತ್ತಮ ಕೆಲಸ ಮಾಡುವುದಕ್ಕೆ ಸ್ಫೂರ್ತಿ ತುಂಬಿದೆ” ಎಂದು ಬರೆದುಕೊಂಡಿದ್ದಾರೆ.
ರಾಜ್ಯ ಸರ್ಕಾರ ಮತ್ತು ಆಯ್ಕೆ ಸಮಿತಿಯವರು ನನ್ನ ಪ್ರತಿಭೆ ಪುರಸ್ಕರಿಸಿ ನೀಡಿದ ಪ್ರಶಸ್ತಿಯನ್ನು ಒಪ್ಪದಿರುವುದಕ್ಕೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.