ಉಡುಪಿ: ಸಾಲ ವಾಪಸು ನೀಡಲಿಲ್ಲ ಎಂದು ಆರೋಪಿಸಿ ಯಕ್ಷಗಾನ ಕಲಾವಿದರೊಬ್ಬರಿಗೆ ಇನ್ನೊರ್ವ ಯಕ್ಷಗಾನ ಕಲಾವಿದ ಹಾಗೂ ಇನ್ನಿಬ್ಬರು ಕಂಬಳದ ಕೋಣಗಳಿಗೆ ಹೊಡೆಯುವ ಬಾರುಕೋಲಿನಿಂದ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನಡೆದಿದೆ.
ಪಡುಬಿದ್ರಿ ನಿವಾಸಿ, ಸಸಿಹಿತ್ಲು ಶ್ರೀ ಭಗವತಿ ಯಕ್ಷಗಾನ ಮೇಳದ ಕಲಾವಿದ ನಿತಿನ್ ಕುಮಾರ್ ಹಲ್ಲೆಗೊಳಗಾದವರು. ಆತನ ಸ್ನೇಹಿತ ಪಾವಂಜೆ ಮೇಳದ ಸಚಿನ್ ಅಮೀನ್ ಉದ್ಯಾವರ ಹಲ್ಲೆ ಆರೋಪಿ ಯಕ್ಷಗಾನ ಕಲಾವಿದ . ಈತನ ಜತೆಗೆ ಆಥನ ತಂದೆ ಕುಶಾಲಣ್ಣ ಹಾಗೂ ಇನ್ನೋರ್ವ ಫೈನಾನ್ಸಿಯರ್ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.
ಯಕ್ಷಗಾನ ಕಲಾವಿದರಾದ ಆರೋಪಿ ಸಚಿನ್ ಹಾಗೂ ಹಲ್ಲೆಗೊಳಗಾದ ನಿತಿನ್ ಗೆಳೆಯರಾಗಿದ್ದರು. ನಿತಿನ್ 2020ರಲ್ಲಿ ಸಚಿನ್ ಬಳಿ ಬಡ್ಡಿಗೆ ಸಾಲ ಪಡೆದಿದ್ದು, ನಿರಂತರವಾಗಿ ಬಡ್ಡಿ ಕಟ್ಟುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಕೆಲ ತಿಂಗಳುಗಳಿಂದ ನಿತಿನ್ ಸರಿಯಾಗಿ ಬಡ್ಡಿ ಕಟ್ಟಿಲ್ಲ ಎನ್ನಲಾಗಿದ್ದು ಪಡೆದ ಸಾಲ ಹಿಂದಿರುಗಿಸುವಂತೆ ಸಚಿನ್ ಒತ್ತಡ ಹಾಕುತ್ತಿದ್ದರು ಎಂದು ತಿಳಿದು ಬಂದಿದೆ.
ಜ. 21ರಂದು ಸಚಿನ್, ಆತನ ತಂದೆ ಕುಶಾಲಣ್ಣ ಹಾಗೂ ಇನ್ನೋರ್ವ ಫೈನಾನ್ಸಿಯರ್ ಸೇರಿ ಉದ್ಯಾವರದ ಮನೆಯೊಂದರಲ್ಲಿ ಕಂಬಳದ ಕೋಣಗಳ ಬಾರುಕೋಲಿನ ಮೂಲಕ ಸತತವಾಗಿ ಹಲ್ಲೆಗೈದಿದ್ದರು. ಬೆತ್ತದಿಂದ ನಿತಿನ್ ಅವರ ಬೆನ್ನಿಗೆ ತಲೆಗೆ, ಕಾಲಿಗೆ ಹೊಡೆದಿದ್ದಾರೆ. ಕಾಲಿನಿಂದ ತುಳಿದು ಕೈಯಿಂದ ಕೆನ್ನೆಗೆ ಹೊಡೆದು ಖಾಲಿ ಬಾಂಡ್ ಪೇಪರ್ಗೆ ಬಲಾತ್ಕಾರವಾಗಿ ಸಹಿ ಪಡೆದುಕೊಂಡಿದ್ದಾರೆ. ಸಂಜೆ ವಾಪಸು ಪಡುಬಿದ್ರಿಗೆ ಆರೋಪಿಗಳೇ ಕಳುಹಿಸಿಕೊಟ್ಟಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದರೂ, ಯಕ್ಷಗಾನದ ಬಗ್ಗೆ ಅತೀವ ಪ್ರೀತಿ ಹೊಂದಿದ್ದ ನಿತಿನ್ ಜ 21ರ ರಾತ್ರಿ ಪುತ್ತೂರಿನಲ್ಲಿ ನಡೆದ ಯಕ್ಷಗಾನಕ್ಕೆ ಹೋಗಿ ಅಲ್ಲಿ ಕಲಾ ಪ್ರದರ್ಶನ ನೀಡಿದ್ದಾರೆ. ಬಳಿಕ ಜ. 22ರಂದು ಪಡುಬಿದ್ರಿಯಖಾಸಗಿ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಮುಂದುವರಿದಿದೆರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ನಲುಗಿ ಗ್ರಾಮ ಗ್ರಾಮವೇ ಊರು ಬಿಟ್ಟು ಹೋಗಿ ಅಡಗಿ ಕೂರುವ ಘಟನೆಗಳು ನಡೆಯುತ್ತಿದೆ. ಇದೀಗ ಈ ಘಟನೆಯೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲೂ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ ನಡೆಯುತ್ತಿರುವುದರ ದ್ಯೂತಕ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿದೆ