ಹೆಸರಾಂತ ವಯೊಲಿನ್ ವಾದಕ ಲಕ್ಷ್ಮಿನಾರಾಯಣ ಸುಬ್ರಮಣಿಯಂ, ಹಿರಿಯ ನಟ ಅನಂತನಾಗ್, ಪ್ರಸಿದ್ಧ ವೈದ್ಯೆ ವಿಜಯಲಕ್ಷ್ಮಿ ದೇಶಮಾನೆ, ತೊಗಲು ಬೊಂಬೆಯಾಟದ ಹಿರಿಯ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಸೇರಿ ರಾಜ್ಯದ 9 ಮಹನೀಯರು ಈ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಗಣರಾಜ್ಯೋತ್ಸವದ ಮುನ್ನಾ. ದಿನವಾದ ಶನಿವಾರ ಕೇಂದ್ರ ಗೃಹ ಸಚಿವಾಲಯ ಈ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ವಿವರ ಪ್ರಕಟಿಸಿತು. 7 ಸಾಧಕರು ‘ಪದ್ಮವಿಭೂಷಣ’, 19 ಸಾಧಕರು ‘ಪದ್ಮಭೂಷಣ’ ಮತ್ತು 113 ಮಂದಿ ತಮ್ಮ ಕ್ಷೇತ್ರಗಳಲ್ಲಿನ ಗಣನೀಯ ಸಾಧನೆಗಾಗಿ ‘ಪದ್ಮಶ್ರಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕದ 9 ಸಾಧಕರ ಪೈಕಿ ವಯೊಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂ ಅವರು ಕಲಾ ಕ್ಷೇತ್ರದಲ್ಲಿನ ಸಾಧನೆಗಾಗಿ ‘ಪದ್ಮವಿಭೂಷಣ’ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಎ.ಸೂರ್ಯಪ್ರಕಾಶ್ ಅವರು ಮತ್ತು ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್ ಅವರು ‘ಪದ್ಮಭೂಷಣ’ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಕಲಾ ಕ್ಷೇತ್ರದ ಸಾಧನೆಗಾಗಿ ಬಾಗಲಕೋಟೆಯ ಭೀಮಮ್ಮ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ, ಹಾಸನ್ ರಘು, ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ಸಾಧನೆಗಾಗಿ ಪ್ರಶಾಂತ್ ಪ್ರಕಾಶ್, ಕಲಾ ಕ್ಷೇತ್ರದ ಸಾಧನೆಗಾಗಿ ರಿಕಿ ಗ್ಯಾನ್ ಕೇಜ್, ಜಾನಪದ ಗಾಯಕ ವೆಂಕಪ್ಪ ಅಂಭಾಜಿ ಸುಗತೇಕರ, ಕ್ಯಾನ್ಸರ್ ರೋಗ ಚಿಕಿತ್ಸಾ ತಜ್ಞೆ ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ‘ಪದ್ಮಶ್ರಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿ ಪುರಸ್ಕೃತ ಪ್ರಮುಖರು: ಚಿತ್ರನಿರ್ದೇಶಕ ಎಂ.ಟಿ.ವಾಸುದೇವನ್ ನಾಯರ್ (ಮರಣೋತ್ತರ), ವಿಶ್ರಾಂತ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ‘ಪದ್ಮವಿಭೂಷಣ’ ಪುರಸ್ಕೃತರಲ್ಲಿ ಸೇರಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ ಜೋಶಿ, ಗಝಲ್ ಗಾಯಕ ಪಂಕಜ್ ಉದಾಸ್ (ಇಬ್ಬರಿಗೂ ಮರಣೋತ್ತರ), ತೆಲುಗಿನ ಹಿರಿಯ ನಟ ನಂದಮೂರಿ ಬಾಲಕೃಷ್ಣ, ಹಾಕಿ ಕ್ರೀಡಾಪಟು ಪಿ.ಆರ್.ಶ್ರೀಜೇಶ್ ಅವರು ‘ಪದ್ಮಭೂಷಣ’ ಪ್ರಶಸ್ತಿ ಪುರಸ್ಕೃತರಲ್ಲಿ ಸೇರಿದ್ದಾರೆ.
ಕ್ರಿಕೆಟ್ ಆಟಗಾರ, ಭಾರತ ತಂಡದ ಮಾಜಿ ಸದಸ್ಯ ಆರ್.ಅಶ್ವಿನ್ ಸೇರಿ 113 ಮಹನೀಯರು ವಿವಿಧ ಕ್ಷೇತ್ರಗಳ ಗಣನೀಯ ಸಾಧನೆಗೆ ಪದ್ಮಶ್ರಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ