ಚಿತ್ರದುರ್ಗ : ಗ್ಯಾರಂಟಿ ಯೋಜನೆಗಳ ಪ್ರಚಾರ ಸಂದರ್ಭದಲ್ಲಿ ವಿರೋಧ ಪಕ್ಷದವರು ಗೇಲಿ ಮಾಡಿದ್ದರು. ಆದರೆ ರಾಜ್ಯದ ಜನತೆ ನಮ್ಮ ಪಕ್ಷವನ್ನು ನಂಬಿ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದರು. ಅಧಿಕಾರಕ್ಕೆ ಬಂದ 3 ತಿಂಗಳ ಒಳಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಲಾಯಿತು. 19 ತಿಂಗಳಿಂದ ನಿರಾಂತಕವಾಗಿ ಯೋಜನೆಗಳು ಮುಂದುವರೆದಿವೆ. ಗೇಲಿ ಮಾಡಿದವರ ಬಾಯಿಂದಲೇ ಪ್ರಶಂಸೆ ಮಾತುಗಳು ಕೇಳಿ ಬರುತ್ತಿವೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಶನಿವಾರ ನಗರದ ಜಿ.ಪಂ. ಕಚೇರಿ ಆವರಣದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿಯ ನೂತನ ಕಚೇರಿಯನ್ನು ಉದ್ಘಾಟಿಸಿ, ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ವಾರ್ಷಿಕವಾಗಿ ರೂ.60,000 ಕೋಟಿ ಖರ್ಚು ಮಾಡುತ್ತಿದೆ. ಪಕ್ಷಭೇದವಿಲ್ಲದೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಷಿಕವಾಗಿ ರೂ.240 ಕೋಟಿಗೂ ಅಧಿಕ, ಅಂದರೆ ಪ್ರತಿ ತಿಂಗಳಿಗೆ ರೂ.20 ಕೋಟಿಯಷ್ಟು ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ. ಇದು ಹುಡುಗಾಟದ ವಿಷಯವಲ್ಲ, ಪಂಚಗ್ಯಾರಂಟಿಗಳು ಜನಪ್ರಿಯವಾಗಿವೆ ಇದರೊಂದಿಗೆ ರಾಜ್ಯದ ಇತರೆ ಅಭಿವೃದ್ಧಿಗಳಿಗೂ ಸರ್ಕಾರ ಒತ್ತು ನೀಡಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.