ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಪ್ರಕಟಿಸಿದ 2025ರ ಕೇಂದ್ರ ಬಜೆಟ್ ಅನ್ನು ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಟೀಕಿಸಿದ್ದಾರೆ. ಗುಂಡೇಟು ಗಾಯಗಳಿಗೆ ಬ್ಯಾಂಡೇಜ್ ಕಟ್ಟಿದಂತೆ ಬಜೆಟ್ ಅನ್ನು ಕೇಂದ್ರ ಸರ್ಕಾರ ಮಂಡಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.
“ಗುಂಡಿನ ಗಾಯಗಳಿಗೆ ಒಂದು ಬ್ಯಾಂಡೇಜ್! ಜಾಗತಿಕ ಅನಿಶ್ಚಿತತೆಯ ನಡುವೆ, ನಮ್ಮ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಒಂದು ಮಾದರಿ ಬದಲಾವಣೆಯ ಅಗತ್ಯವಿತ್ತು. ಆದರೆ ಈ ಸರ್ಕಾರವು ಆಲೋಚನೆಗಳಿಂದ ದಿವಾಳಿಯಾಗಿದೆ,” ಎಂದು ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2025-26ರ ಸಾಲಿನ ಬಜೆಟ್ ಅನ್ನು ಭಾರತದ ಅಭಿವೃದ್ದಿ ಪ್ರಯಾಣಕ್ಕೆ ʻಶಕ್ತಿ ಗುಣಕʼ ಎಂದು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಲ್ಲದೆ, 140 ಕೋಟಿ ಭಾರತೀಯರಿಗೆ “ಮಹತ್ವಾಕಾಂಕ್ಷಿ ಬಜೆಟ್” ಎಂದು ಬಣ್ಣಿಸಿದ್ದಾರೆ.
ಕೇಂದ್ರ ಬಜೆಟ್ನಲ್ಲಿ ಬಿಹಾರ ರಾಜ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, “ಬಿಜೆಪಿ ಕುರ್ಚಿಗಳಿಂದ ನೀವು ಕೇಳಿದ ಚಪ್ಪಾಳೆ ಮಧ್ಯಮ ವರ್ಗದ ತೆರಿಗೆ ಕಡಿತಕ್ಕೆ ಎಂದು ನಾನು ಭಾವಿಸುತ್ತೇನೆ. ನಾವು ವಿವರಗಳನ್ನು ನೋಡಿದ್ದೇವೆ ಹಾಗೂ ಇದು ಒಳ್ಳೆಯದಾಗಿರಬಹುದು.
ಆದ್ದರಿಂದ ನಿಮಗೆ ಸಂಬಳವಿದ್ದರೆ ನೀವು ಕಡಿಮೆ ತೆರಿಗೆ ಪಾವತಿಸುತ್ತಿರಬಹುದು. ಆದರೆ ಪ್ರಮುಖ ಪ್ರಶ್ನೆಯೆಂದರೆ ನಮಗೆ ಸಂಬಳವಿಲ್ಲದಿದ್ದರೆ ಏನಾಗುತ್ತೆ? ಆದಾಯ ಎಲ್ಲಿಂದ ಬರುತ್ತದೆ? ನೀವು ಆದಾಯ ತೆರಿಗೆ ವಿನಾಯಿತಿಯಿಂದ ಪ್ರಯೋಜನ ಪಡೆಯಬೇಕಾದರೆ, ನಿಮಗೆ ನಿಜವಾಗಿಯೂ ಉದ್ಯೋಗಗಳು ಬೇಕಾಗುತ್ತವೆ. ಹಣಕಾಸು ಸಚಿವರು ನಿರುದ್ಯೋಗದ ಬಗ್ಗೆ ಪ್ರಸ್ತಾಪಿಸಲಿಲ್ಲ,” ಎಂದು ಹೇಳಿದ್ದಾರೆ.
“ಒಂದು ರಾಷ್ಟ್ರ, ಒಂದು ಚುನಾವಣೆ ಬಯಸುವ ಪಕ್ಷವೊಂದು ಪ್ರತಿ ವರ್ಷ ಪ್ರತಿಯೊಂದು ರಾಜ್ಯದಲ್ಲಿಯೂ ಪ್ರತಿಯೊಂದು ಚುನಾವಣೆಯನ್ನು ಬಳಸಿಕೊಂಡು ಹೆಚ್ಚಿನ ಉಚಿತ ಕೊಡುಗೆಗಳನ್ನು ನೀಡುತ್ತಿರುವುದು ವಿಪರ್ಯಾಸ. ಅವರು ತಮ್ಮ ಮಿತ್ರಪಕ್ಷಗಳಿಂದ ಹೆಚ್ಚಿನ ಚಪ್ಪಾಳೆ ಪಡೆಯಲು ಬಹು ಚುನಾವಣೆಗಳನ್ನು ನಡೆಸಬಹುದು,” ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ.































