ಬೆಂಗಳೂರಿನ ಹೆಬ್ಬಾಳ ಠಾಣೆ ಪೊಲೀಸರು ವಧು ತೋರಿಸುವ ನೆಪದಲ್ಲಿ ಯುವಕನನ್ನು ಹನಿಟ್ರ್ಯಾಪ್ ಮೂಲಕ ಖೆಡ್ಡಾಕ್ಕೆ ಕೆಡವಿ ಬಳಿಕ ಸುಲಿಗೆ ಮಾಡುತ್ತಿದ್ದ ನಾಲ್ವರು ಮಹಿಳೆಯರು ಸೇರಿದಂತೆ ಆರು ಆರೋಪಿಗಳನ್ನು ಅರೆಸ್ಟ್ ಮಾಡಿದ ಘಟನೆ ನಡೆದಿದೆ. ಬಂಧಿತ ಆರೋಪಿಗಳು ಗೀತಾ, ಮಂಜುಳಾ, ವಿಜಯಲಕ್ಷ್ಮಿ, ಲೀಲಾವತಿ, ಹರೀಶ್ ಹಾಗೂ ವೆಂಕಟೇಶ ಎಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ಸಂತ್ರಸ್ತ ಯುವಕನಿಗೆ ಆರೋಪಿ ಮಂಜುಳ ಪರಿಚಯವಾಗಿದ್ದಳು. ಇಬ್ಬರು ಪರಸ್ಪರ ಪೋನ್ ನಂಬರ್ ಬದಲಾಯಿಸಿಕೊಂಡಿದ್ದರು. ಈ ವೇಳೆ ಯುವಕ ತಾನು ವಧು ಹುಡುಕುತ್ತಿದ್ದು, ನಿಮ್ಮ ಕಡೆ ಕನ್ಯೆ ಇದ್ದರೆ ಹೇಳಿ ಎಂದು ಮಂಜುಳಗೆ ಹೇಳಿದ್ದರು.
ಈ ಬಗ್ಗೆ ಜನವರಿ 20 ರಂದು ಮಂಜುಳಾಗೆ ಕರೆ ಮಾಡಿದ ಯುವಕನಿಗೆ ಹೆಬ್ಬಾಳದ ತನ್ನ ಫ್ರೆಂಡ್ ಮನೆಗೆ ಹೋದರೆ ಕನ್ಯೆ ತೋರಿಸುವುದಾಗಿ ಹೇಳಿದ್ದಳು. ಅದರಂತೆ ಸಂತ್ರಸ್ತ ಯುವಕ ಮಂಜುಳ ಸ್ನೇಹಿತೆ ವಿಜಯಲಕ್ಷ್ಮಿ ಮನೆಗೆ ತೆರಳಿದ್ದನು.
ಈ ವೇಳೆ ಆತನಿಗೆ ಲೀಲಾವತಿ ಎಂಬ ಯುವತಿಯನ್ನು ವಿಜಯಲಕ್ಷ್ಮಿ ಪರಿಚಯ ಮಾಡಿಸಿದ್ದಾಳೆ. ಟೀ ಮಾಡು, ಹೀಗ ಹೋಗಿ, ಹಾಗ ಬರ್ತಿನಿ ಅಂತ ಹೇಳಿ ಯುವಕನಿಂದ ಹಣ ಪಡೆದು ವಿಜಯಲಕ್ಷ್ಮಿ ಆ ಮನೆಯಿಂದ ಹೋಗಿದ್ದಾಳೆ.
ಮನೆಯಲ್ಲಿ ಸಂತ್ರಸ್ತ ಯುವಕ ಮತ್ತು ಲೀಲಾವತಿ ಇಬ್ಬರೇ ಇದ್ದರು. ಈ ವೇಳೆ ಪೊಲೀಸರ ಸೋಗಿನಲ್ಲಿ ಗೀತಾ, ವೆಂಕಟೇಶ ಮತ್ತು ಹರೀಶ ಬಂದಿದ್ದಾರೆ. ಮನೆಯಲ್ಲಿ ವೈಶ್ಯಾವಾಟಿಕೆ (prostitution) ನಡೆಸುತ್ತಿದ್ದೀರಾ? ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಇದರಿಂದ ಅಂಜಿದ ಸಂತ್ರಸ್ತ ಯುವಕ, ಆರೋಪಿಗಳಿಗೆ ಪೋನ್ ಪೇ ಮೂಲಕ 50 ಸಾವಿರ ಹಣ ಕೊಟ್ಟಿದ್ದ ಎನ್ನಲಾಗಿದೆ. ಆಬಳಿಕ, ತಾನು ಮೋಸ ಹೋಗಿದ್ದೇನೆ ಎಂದು ತಿಳಿದ ಸಂತ್ರಸ್ತ ಯುವಕ, ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಆರು ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.