ನವದೆಹಲಿ : ಕೇಂದ್ರ ಬಜೆಟ್ನ್ನು ಟೀಕಿಸಿದ ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿಯು ತಿರುಗೇಟು ನೀಡಿದ್ದಾರೆ. 2025ರ ಬಜೆಟ್ನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಇದನ್ನು ದೇಶದ ಮಧ್ಯಮವರ್ಗದವರಿಗೆ ಅತ್ಯಂತ ಸ್ನೇಹಪೂರಿತ ಬಜೆಟ್ ಎಂದು ಬಣ್ಣಿಸಿದ್ದಾರೆ.
ದೆಹಲಿಯ ಆರ್.ಕೆ. ಪುರಂನಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಮೋದಿ, ಬಜೆಟ್ನಲ್ಲಿ ಆದಾಯ ತೆರಿಗೆ ಇಳಿಕೆಯನ್ನು ಪ್ರಸ್ತಾಪಿಸಿ, ಭಾರತದೆಲ್ಲಾ ಕಾಲಘಟ್ಟಗಳಲ್ಲಿಯೂ ತೆರಿಗೆ ರಚನೆಯಲ್ಲಿ ಆದ ಬದಲಾವಣೆಗಳನ್ನು ವಿವರಿಸಿದರು. “ನಾವು 12 ಲಕ್ಷ ರೂ ಆದಾಯ ಗಳಿಸಿದವರಿಗೆ ತೆರಿಗೆ ಹಾಕದೇ ಇದ್ದೇವೆ. ಆದರೆ ನೆಹರೂ ಕಾಲಘಟ್ಟದಲ್ಲಿ ಈ ಆದಾಯಕ್ಕೆ ಸಂಬಳದ ಬಹುಭಾಗ ತೆರಿಗೆಗೆ ಒಳಪಡುತ್ತಿತ್ತ್ತು. ಇಂದಿರಾ ಗಾಂಧಿ ಸರ್ಕಾರದಲ್ಲಿ, ಪ್ರತೀ 12 ಲಕ್ಷ ರೂ ಆದಾಯಕ್ಕೆ 10 ಲಕ್ಷ ರೂ ತೆರಿಗೆ ಪಾವತಿಸಬೇಕಿತ್ತು. 10-12 ವರ್ಷಗಳ ಹಿಂದೆ, ಕಾಂಗ್ರೆಸ್ ಸರ್ಕಾರದಲ್ಲಿ 12 ಲಕ್ಷ ರೂ ಆದಾಯಕ್ಕೆ 2.60 ಲಕ್ಷ ರೂ ತೆರಿಗೆ ಹಾಕಬೇಕಿತ್ತು. ಆದರೆ ಇದೀಗ ನೀವು 12 ಲಕ್ಷ ರೂ ಆದಾಯ ಗಳಿಸಿದರೆ, ಒಂದೇ ರೂಪಾಯಿಯೂ ತೆರಿಗೆಯಾಗಿ ಪಾವತಿಸಬೇಕಾಗಿಲ್ಲ,” ಎಂದು ಮೋದಿ ವಿವರಿಸಿದರು.
“ಮಧ್ಯಮವರ್ಗದವರು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅವರನ್ನು ಗೌರವಿಸುವ ಮತ್ತು ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಉತ್ತೇಜನ ನೀಡುವ ಏಕೈಕ ಪಕ್ಷ ಬಿಜೆಪಿ,” ಎಂದು ಪ್ರಧಾನಿ ಹೇಳಿದರು. “ವಿಕಸಿತ ಭಾರತದ ಕನಸು ಸಾಕಾರಗೊಳಿಸಲು, ನಮ್ಮ ನಾಲ್ಕು ಪ್ರಮುಖ ಸ್ತಂಭಗಳನ್ನು ಗಟ್ಟಿಗೊಳಿಸಲು ನಾವು ನಿರ್ಧರಿಸಿದ್ದೇವೆ. ಅವು ರೈತರು, ಮಹಿಳೆಯರು, ಬಡವರು ಮತ್ತು ಯುವಜನರು. ಈ ನಾಲ್ಕು ಸ್ತಂಭಗಳನ್ನು ಬಲಪಡಿಸುವ ದಾರಿಯಲ್ಲಿಯೇ ನಿನ್ನೆಯ ಬಜೆಟ್ ಹೆಜ್ಜೆಹಾಕಿದೆ,” ಎಂದು ಮೋದಿ ತದನಂತರ ದೇಶದ ಜನತೆಯ ಬಗೆಗಿನ ತಮ್ಮ ದೃಷ್ಟಿಯನ್ನು ಸ್ಪಷ್ಟಪಡಿಸಿದರು.