ಕೋಲಾರ: ಕುಡಿತದ ಮತ್ತಿನಲ್ಲಿ ರೈಲ್ವೆ ನಿಲ್ದಾಣದೊಳಗೆ ಕಾರು ನುಗ್ಗಿದ ಘಟನೆ ಮಾಲೂರು ತಾಲೂಕಿನ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.
ಕಂಠಪೂರ್ತಿ ಮದ್ಯಪಾನ ಮಾಡಿದ್ದ ರಾಕೇಶ್ ಎಂಬ ವ್ಯಕ್ತಿ, ಮಾರುತಿ ಸ್ವಿಫ್ಟ್ ಡಿಸೈರ್ ಕಾರು ನುಗ್ಗಿಸಿ, ರೈಲ್ವೆ ನಿಲ್ದಾಣದಲ್ಲಿ ಮೆಟ್ಟಿಲಗಳನ್ನು ಇಳಿದು ಸೀದಾ ರೈಲ್ವೇ ಪ್ಲಾಟ್ಫಾರ್ಮ್ ಮೇಲೆ ಪಕ್ಕವಾಗಿ ಹೋಗಿ, ಟ್ರಾಕ್ ಮೇಲೆ ಬಂದು ನಿಂತಿದ್ದಾನೆ. ಕಾರು ನಿಯಂತ್ರಣ ತಪ್ಪಿ ಟ್ರಾಕ್ ಮೇಲೆ ನಿಂತು ಹೋಗಿರುವುದನ್ನು ನೋಡಿದ ರೈಲ್ವೆ ಸಿಬ್ಬಂದಿಗೆ ಗಾಬರಿಯ ಮೂಡಿ ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ.
ರೈಲುಗಳ ಸಂಚಾರ ಜಂಕ್ಷನ್ ಆಗಿರುವ ಟೇಕಲ್ ನಿಲ್ದಾಣದಲ್ಲಿ, ಯಾವುದೇ ರೈಲು ಬಾರದ ಕಾರಣ ಭಾರೀ ಅಪಾಯ ತಪ್ಪಿತ್ತು. ಈ ಬಗ್ಗೆ ಎಚ್ಚೆತ್ತ ರೈಲ್ವೆ ಅಧಿಕಾರಿಗಳು ಜೆಸಿಬಿ ಸಹಾಯದಿಂದ ಕಾರು ತೆರವುಗೊಳಿಸಿದ್ದಾರೆ. ರಾಕೇಶ್ನನ್ನು ದೇವನಗುಂದಿ ರೈಲ್ವೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅವರ ವಿರುದ್ಧ ವೈದ್ಯಕೀಯ ತಪಾಸಣೆ ನಡೆಸಿ, ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.