ಲಕ್ನೊ: ಅಯೋಧ್ಯೆಯಲ್ಲಿ ನಡೆದಿದ್ದ ದಲಿತ ಯುವತಿಯ ಕೊಲೆ ಸಂಬಂಧ ಸೋಮವಾರ ಮುಖ್ಯ ಆರೋಪಿ ದಿಗ್ವಿಜಯ್ ಹಾಗೂ ಆತನ ಸಹಚರರಾದ ವಿಜಯ್ ಸಾಹು ಹಾಗೂ ಹರಿರಾಮ್ ಕೋರಿ ಒಳಗೊಂಡಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕರಣ್ ನಯ್ಯರ್ ಪ್ರಕಾರ, ಮುಖ್ಯ ಆರೋಪಿ ದಿಗ್ವಿಜಯ್ ಮೃತ ಯುವತಿಯ ಗ್ರಾಮವಾದ ಸಹ್ನಾವದ ನಿವಾಸಿಯಾಗಿದ್ದಾನೆ ಎಂದು ಹೇಳಲಾಗಿದೆ.
ಮೃತ ಯುವತಿಯು ದಿಗ್ವಿಜಯ್ ನೊಂದಿಗೆ ಸಲುಗೆಯಿಂದಿದ್ದಳು ಹಾಗೂ ಎರಡು ತಿಂಗಳ ಹಿಂದೆ ದಿಗ್ವಿಜಯ್ ನೊಂದಿಗೆ ಆಕೆಯನ್ನು ಆಕೆಯ ಸಹೋದರ ನೋಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನನ್ನ ಸಹೋದರಿಯಿಂದ ದೂರ ಉಳಿಯುವಂತೆ ದಿಗ್ವಿಜಯ್ ಗೆ ಎಚ್ಚರಿಕೆ ನೀಡಿದ್ದ ಯುವತಿಯ ಸಹೋದರ, ಆತನನ್ನು ತೀವ್ರವಾಗಿ ಥಳಿಸಿದ್ದ ಎನ್ನಲಾಗಿದೆ. ಇದರಿಂದ ಅಪಮಾನಿತನಾದ ದಿಗ್ವಿಜಯ್, ಪ್ರತೀಕಾರವಾಗಿ ಯುವತಿಯನ್ನು ಹತ್ಯೆಗೈದಿದ್ದಾನೆ ಎಂದು ಹೇಳಲಾಗಿದೆ.
22 ವರ್ಷದ ಯುವತಿಯು ಗುರುವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ದೇಹದ ಮೇಲೆ ಹಲವು ಗಾಯಗಳು ಹಾಗೂ ಮುರಿದ ಕಾಲುಗಳೊಂದಿಗೆ ಆ ಯುವತಿಯ ನಗ್ನ ಮೃತದೇಹವು ಶನಿವಾರ ಬೆಳಗ್ಗೆ ಗ್ರಾಮದ ಹೊರವಲಯದಲ್ಲಿರುವ ಬತ್ತಿದ ನಾಲೆಯೊಂದರಲ್ಲಿ ಪತ್ತೆಯಾಗಿತ್ತು.