ನವದೆಹಲಿ : ದೆಹಲಿ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅತಿಶಿ ವಿರುದ್ಧ ಬಿಎನ್ಎಸ್ ಸೆಕ್ಷನ್ 188 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅತಿಶಿ ಮತ್ತು ಅವರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಡಿಯೋದಲ್ಲಿ, ಅತಿಶಿ ಅವರ ಬೆಂಬಲಿಗ ಸಾಗರ್ ಮೆಹ್ತಾ ಪೊಲೀಸ್ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ.
ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರ ಸೋಮವಾರಕ್ಕೆ ಕೊನೆಗೊಂಡಿತ್ತು. ಆದರೆ ತಡರಾತ್ರಿಯವರೆಗೂ ಪಕ್ಷದ ಕಾರ್ಯಕರ್ತರು ಅನೇಕ ಸ್ಥಳಗಳಲ್ಲಿ ಪ್ರಚಾರ ನಡೆಸುತ್ತಿದ್ದರು. ಗೋವಿಂದಪುರಿ ಪೊಲೀಸ್ ಠಾಣೆಯ ಪೊಲೀಸರು ಅತಿಶಿ ವಿರುದ್ಧ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಎಫ್ಐಆರ್ ದಾಖಲಿಸಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಗೆ ಫೆಬ್ರವರಿ 5 ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ.