ತಿರುವನಂತಪುರಂ : ಅಂಗನವಾಡಿಯಲ್ಲಿ ಉಪ್ಪಿಟ್ಟಿನ ಬದಲಿಗೆ ಬಿರಿಯಾನಿ ಮತ್ತು ಚಿಕನ್ ಫ್ರೈ ನೀಡುವಂತೆ ಮಗುವೊಂದು ಮನವಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೇರಳದ ಮಕ್ಕಳ ಆರೈಕೆ ಕೇಂದ್ರಗಳಲ್ಲಿ ಸರಕಾರವು ಮೆನುವಿನಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ, “ನನಗೆ ಉಪ್ಮಾ ಬದಲಿಗೆ ಅಂಗನವಾಡಿಯಲ್ಲಿ ಬಿರಿಯಾನಿ ಮತ್ತು ಪೊರಿಚ ಕೋಳಿ’ (ಚಿಕನ್ ಫ್ರೈ) ಬೇಕು” ಎಂದು ಮಗು ತನ್ನ ತಾಯಿಯನ್ನ ಮುಗ್ಧವಾಗಿ ಕೇಳುತ್ತಿದೆ. ಮನೆಯಲ್ಲಿ ಬಿರಿಯಾನಿ ತಿನ್ನುವಾಗ ಮಗು ವಿನಂತಿಸಿದಾಗ ವೀಡಿಯೊವನ್ನು ಚಿತ್ರೀಕರಿಸಿದ ತಾಯಿ, ಬಳಿಕ ಅದನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋವನ್ನು ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅಂಗನವಾಡಿಯ ಮೆನುವನ್ನು ಪರಿಷ್ಕರಿಸಲಾಗುವುದು. ಮಗು ಮುಗ್ಧವಾಗಿ ವಿನಂತಿಸಿದೆ. ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಶಂಕು, ಅವರ ತಾಯಿ ಮತ್ತು ಅಂಗನವಾಡಿ ಸಿಬ್ಬಂದಿಗೆ ಶುಭಾಶಯ ತಿಳಿಸಿದ ಸಚಿವೆ ವೀಣಾ ಜಾರ್ಜ್, ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಖಚಿತಪಡಿಸಿಕೊಳ್ಳಲು ಅಂಗನವಾಡಿಗಳ ಮೂಲಕ ವಿವಿಧ ರೀತಿಯ ಆಹಾರವನ್ನು ಒದಗಿಸಲಾಗುತ್ತದೆ. ಶಂಕುವಿನ ಸಲಹೆಯನ್ನು ಗಣನೆಗೆ ತೆಗೆದುಕೊಂಡು ಮೆನುವನ್ನು ಪರಿಶೀಲಿಸಲಾಗುವುದು ಎಂದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಸರ್ಕಾರವು ಅಂಗನವಾಡಿಗಳ ಮೂಲಕ ಮಕ್ಕಳಿಗೆ ಮೊಟ್ಟೆ ಮತ್ತು ಹಾಲು ಒದಗಿಸುವ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಸ್ಥಳೀಯ ಸಂಸ್ಥೆಗಳು ಅಂಗನವಾಡಿಗಳಲ್ಲಿ ವಿವಿಧ ರೀತಿಯ ಆಹಾರಗಳನ್ನು ಒದಗಿಸುತ್ತವೆ ಅವರು ತಿಳಿಸಿದ್ದಾರೆ.