ಬೆಂಗಳೂರು: ಬ್ಯಾಂಕ್ ಗಳಿಂದ ವಸೂಲಿಯಾದ ಸಾಲದ ವಿವರ ಕೋರಿ ಆರ್ಥಿಕ ಅಪರಾಧಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಮಲ್ಯ ಪರವಾಗಿ ಹಿರಿಯ ವಕೀಲ ಸಾಜನ್ ಪೂವಯ್ಯ ವಾದ ಮಂಡಿಸಿದ್ದಾರೆ.
ರೂ. 6,200 ಕೋಟಿ ಮರು ಪಾವತಿಸಬೇಕಿತ್ತು. ಆದರೆ ರೂ. 14,000 ಕೋಟಿ ವಸೂಲಿ ಮಾಡಲಾಗಿದೆ.ಇದನ್ನು ಲೋಕಸಭೆಗೆ ಹಣಕಾಸು ಸಚಿವರು ತಿಳಿಸಿದ್ದಾರೆ ಎಂದು ಮಲ್ಯ ಪರ ವಕೀಲರು ಹೇಳಿದ್ದಾರೆ.ರೂ. 10, 200 ಕೋಟಿ ವಸೂಲಿಯಾಗಿದೆ ಎಂದು ಸಾಲ ವಸೂಲಾತಿ ಅಧಿಕಾರಿ ಹೇಳಿಕೆ ನೀಡಿದ್ದಾರೆ ಎಂದು ಮಲ್ಯ ಪರ ವಕೀಲರು ವಾದಿಸಿದ್ದಾರೆ. ಸಂಪೂರ್ಣ ಸಾಲದ ಮೊತ್ತವನ್ನು ತೆರವುಗೊಳಿಸಲಾಗಿದ್ದರೂ ಪ್ರಕ್ರಿಯೆ ಇನ್ನೂ ಮುಂದುವರೆದಿದೆ. ವಸೂಲಾದ ಸಾಲದ ಮೊತ್ತದ ವಿವರ ನೀಡುವಂತೆ ಬ್ಯಾಂಕ್ ಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
ಮಲ್ಯ ಅವರ ಅರ್ಜಿಯನ್ನು ಆಧರಿಸಿ ನ್ಯಾಯಮೂರ್ತಿ ಆರ್. ದೇವದಾಸ್ ನೇತೃತ್ವದ ಹೈಕೋರ್ಟ್ ಪೀಠ, ಬ್ಯಾಂಕ್ ಗಳು ಮತ್ತು ಸಾಲ ವಸೂಲಾತಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.ಈ ಹಿಂದೆ 2024 ಡಿಸೆಂಬರ್ 18 ರಂದು ವಿಜಯ್ ಮಲ್ಯ ಅವರು ರೂ. 6,203 ಕೋಟಿ ಸಾಲದ ವಿರುದ್ಧ ಬ್ಯಾಂಕ್ ಗಳು ರೂ. 14, 131.60 ಕೋಟಿ ವಸೂಲಿ ಮಾಡಿದ್ದಾರೆ ಎಂದು ಹೇಳಿದ್ದರು. ಈಗಲೂ ಅವರು ಆರ್ಥಿಕ ಅಪರಾಧಿಯಾಗಿಯೇ ಮುಂದುವರೆದಿದ್ದು, ಲಂಡನ್ ನಲ್ಲಿದ್ದಾರೆ.ಸಾಲ ಮರುಪಾವತಿಸದ ಆರೋಪ ಹೊತ್ತಿರುವ ವಿಜಯ್ ಮಲ್ಯ ಅವರನ್ನು ದೇಶಕ್ಕೆ ಹಸ್ತಾಂತರಿಸಲು ಭಾರತ ಸರ್ಕಾರ ಪ್ರಯತ್ನ ನಡೆಸುತ್ತಿದೆ.