ಬೆಂಗಳೂರು: ಅರಮನೆ ಮೈದಾನದ ಟಿಡಿಆರ್ ಪರಿಹಾರಕ್ಕಿಂತಲೂ ದೊಡ್ಡ ಪ್ರಕರಣ ಒಂದು ಈಗ ಬಹಿರಂಗವಾಗಿದೆ. ಕೊಪ್ಪಳ ಜಿಲ್ಲೆಯ ಆನೆಗೊಂದಿ ತೂಗು ಸೇತುವೆ ಕಾಮಗಾರಿ ನಷ್ಟ ಪರಿಹಾರ ಸಂಬಂಧ ಹೊರ ರಾಜ್ಯ ಗುತ್ತಿಗೆದಾರರೊಬ್ಬರು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಸೆಡ್ಡು ಹೊಡೆದ ಪರಿಣಾಮ ಇದೀಗ ಮುಖ್ಯ ಕಾರ್ಯದರ್ಶಿಗೆ ಅರೆಸ್ಟ್ ವಾರಂಟ್ ಜಾರಿಯಾಗಿದೆ. 6 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ 5,219 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಬೇಡಿಕೆ ಇಟ್ಟ ವಿಶೇಷ ಪ್ರಕರಣ ಇದಾಗಿದೆ. ಗುತ್ತಿಗೆದಾರನ ವರಸೆ ಕಂಡು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೂಡ ಕಂಗಾಲಾಗಿದೆ. ಸಮಿತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಸ್ಥಿಕೆ ವಹಿಸಲು ಶಿಫಾರಸು ಮಾಡಿದ್ದು, ಸಮಸ್ಯೆ ಬಗೆಹರಿಸುವಂತೆ ತಿಳಿಸಿದೆ. ಏನಿದು ಪರಿಹಾರ ಪ್ರಕರಣ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಹತ್ತಿರ ತುಂಗಭದ್ರ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣ ಕಾಮಗಾರಿ. 1993ರಲ್ಲಿ ಶಂಕುಸ್ಥಾಪನೆ ಮಾಡಲಾಗಿತ್ತು. ನಬಾರ್ಡ್ ಸಾಲ ಸಹಾಯದ ಆರ್‌ಐಡಿಎಫ್-2 ಯೋಜನೆಯಡಿ 4.12 ಕೋಟಿ ರೂಪಾಯಿ ಮೊತ್ತದಲ್ಲಿ ಅನುಮೋದನೆ ಪಡೆಯಲಾಗಿತ್ತು. ತುಂಗಭದ್ರಾ ನದಿಯ ಪಾತ್ರದಲ್ಲಿ ತೂಗು ಸೇತುವೆ ನಿರ್ಮಾಣ ಮಾಡುವ ಕಾಮಗಾರಿಯನ್ನು ಹೈದರಾಬಾದ್ ಮೂಲದ ಬಿವಿ ಸುಬ್ಬಾರೆಡ್ಡಿ ಅಂಡ್ ಸನ್ಸ್ ಟೆಂಡರ್ ಪಡೆದು 1997ರಲ್ಲಿ, ಪ್ರಾರಂಭಿಸಲಾಗಿತ್ತು. ಕಾಮಗಾರಿಯು ಪ್ರಗತಿಯಲ್ಲಿದ್ದಾಗಲೇ 1999ರಲ್ಲೇ ಹಂಪಿ ವಿಶ್ವಪರಾಂಪರಿಕ ಪ್ರದೇಶ ಘೋಷಣೆಯಾಯ್ತು. ಆಗ ಕಾಮಗಾರಿ ಸ್ಥಗಿತವಾಯ್ತು. ರಾಜ್ಯ ಸರ್ಕಾರದ ಒತ್ತಾಯ ಹಾಗೂ ಕೇಂದ್ರ ಸರ್ಕಾರದ ಮಧ್ಯಸ್ತಿಕೆಯಿಂದ ಮತ್ತೆ 2005ರಂದು ಯುನೆಸ್ಕೊ ತಂಡ ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಿತು. ಈ ಕಾಮಗಾರಿಯನ್ನು ಮತ್ತೆ ಬಿವಿ ರೆಡ್ಡಿ ಅಂಡ್ ಸನ್ಸ್ ಕಂಪನಿ, ಹೈದರಾಬಾದ್ ಇವರಿಗೆ 6.62 ಕೋಟಿ ರೂಪಾಯಿಗೆ ವಹಿಸಲಾಯಿತು. ಗುತ್ತಿಗೆ ಕರಾರಿನಂತೆ ಗುತ್ತಿಗೆದಾರರು ಈ ಕಾಮಗಾರಿಗೆ ಬೇಕಾದ ತಾಂತ್ರಿಕ ವಿನ್ಯಾಸ, ನಕ್ಷೆ, ಅನುಷ್ಠಾನ ಯೋಜನೆ ಇವುಗಳನ್ನು ನುರಿತ ತಜ್ಞರಿಂದ ತಯಾರಿಸಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯಬೇಕಿತ್ತು. ಆದರೆ ಗುತ್ತಿಗೆದಾರರು ಒಡಂಬಡಿಕೆಯ ಷರತ್ತುಗಳನ್ನು ಪಾಲಿಸಲಿಲ್ಲ. ಕಾಮಗಾರಿಗೆ ಬೇಕಾಗಿರುವ ಅವಶ್ಯ ವಿನ್ಯಾಸ, ನಕ್ಷೆ ಇವುಗಳನ್ನು ಸಲ್ಲಿಸಿ, ಇಲಾಖೆಯ ಅನುಮೋದನೆ ಪಡೆಡಿರಲಿಲ್ಲ. ಬಾಕಿ ಇದ್ದ 24 ಮೀಟರ್ ಅಂಕಣ ನಿರ್ಮಿಸಲು ಮುಂದಾದಾಗ 22-01-2009ರಂದು ಕಾಂಕ್ರೀಟ್ ಹಾಕುವ ಸಮಯದಲ್ಲಿ ಸೇತುವೆಯು ಕುಸಿಯಿತು. ಈ ಘಟನೆಯಿಂದ ಲೋಕೋಪಯೋಗಿ ಇಲಾಖೆಗೆ ಗುತ್ತಿಗೆದಾರರ ಬೇಜವಾಬ್ದಾರಿಯಿಂದ 5.95 ಕೋಟಿ ನಷ್ಟವಾಗಿದೆ. ಈ ದುರ್ಘಟನೆಯಲ್ಲಿ 8 ಜನ ಕಾರ್ಮಿಕರು ಮರಣ ಹೊಂದಿದ್ದು, 41 ಜನರು ಗಾಯಗೊಂಡಿದ್ದರು. ಗುತ್ತಿಗೆದಾರ ಬಿವಿ ರೆಡ್ಡಿ ಸರ್ಕಾರದ ವಿರುದ್ಧ ಗಂಗಾವತಿ ನ್ಯಾಯಾಲಯದಲ್ಲಿ 2012 ರಂದು 7.00 ಕೋಟಿ ಪರಿಹಾರ ಕೋರಿ ಕೇಸ್ ದಾಖಲಿಸ್ತಾರೆ. ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20-02-2021ರಲ್ಲಿ ತೀರ್ಪು ಪ್ರಕಟವಾಯ್ತು. ಅದರಂತೆ ಗುತ್ತಿಗೆದಾರರಿಗೆ 5.64 ಕೋಟಿ ರೂ. ಮೊತ್ತ ಪರಿಹಾರ ಶೇ 18 ರಷ್ಟು ಬಡ್ಡಿ ನೀಡುವಂತೆ ಆದೇಶ ನೀಡಿತು. ಈ ಆದೇಶದ ವಿರುದ್ಧ ಸರ್ಕಾರ ಹೈಕೋರ್ಟ್ ಧಾರವಾಡ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತು. ಗುತ್ತಿಗೆದಾರರು ಪುನಃ ಕೊಪ್ಪಳ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಪರಿಣಾಮ ಹಿನ್ನೆಲೆಯಲ್ಲಿ ನ್ಯಾಯಾಧೀಶರು 20-02-2021 ರಂದು 7.00 ಕೋಟಿ ರೂ. ಪರಿಹಾರ ಶೇ 24 ರಷ್ಟು ಬಡ್ಡಿ ನೀಡಬೇಕು ಎಂದು ಆದೇಶಿಸಿದರು. ಗುತ್ತಿಗೆದಾರ ಬಿವಿ ರೆಡ್ಡಿ ಕೊಪ್ಪಳ ಜಿಲ್ಲಾ ನ್ಯಾಯಾಲಯದ ತೀರ್ಪಿನ ಮೊತ್ತ ರೂ. 7.00 ಕೋಟಿಗೆ ಹೆಚ್ಚುವರಿಯಾಗಿ ಆದಾಯದ ನಷ್ಟ – 15%, ವಾರ್ಷಿಕ ಬಡ್ಡಿ – 15%, ಓವರ್ ಹೆಡ್ ಚಾರ್ಜಸ್ – 25%, ಜೊತೆಗೆ ಹಡ್ಸನ್ ಫಾರ್ಮುಲಾ ಪ್ರಕಾರ ಒಟ್ಟು ನಷ್ಟವನ್ನು ಅಂದಾಜಿಸಿ ಈ ಮೊತ್ತಕ್ಕೆ ಒಟ್ಟಾರೆ ಬಡ್ಡಿ 24% ಸೇರಿಸಿ ಒಟ್ಟು ಪರಿಹಾರದ ಮೊತ್ತ 2351.35 ಕೋಟಿ ಕೊಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. – ಈ ಬಗ್ಗೆ ಗುತ್ತಿಗೆದಾರರು ಪರಿಹಾರ ಮೊತ್ತವನ್ನು ನೀಡಲು ಕೋರಿ ಅನೇಕ ಮನವಿ ಪತ್ರಗಳನ್ನು ಸಲ್ಲಿಸಿದ್ದರು. ಅದರಂತೆ 24-09-2024 ರಲ್ಲಿ 4645.59 ಕೋಟಿ ರೂ. ಪರಿಹಾರಕ್ಕೆ ಗುತ್ತಿಗೆದಾರ ಮನವಿ ಪತ್ರ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಲಯದ ತೀರ್ಪಿನ ಮೊತ್ತವನ್ನು ಗುತ್ತಿಗೆದಾರರು ಹೆಚ್ಚಳ ಮಾಡಿ ಭಾರಿ ಮೊತ್ತದ ಪರಿಹಾರ ಕೋರುತ್ತಿರುವುದರಿಂದ ಈ ಬಗ್ಗೆ ಯಾವುದೇ ಕ್ರಮ ವಹಿಸಲಾಗಿರುವುದಿಲ್ಲ. ಈ ನಡುವೆ ಗುತ್ತಿಗೆದಾರರು ಕೊಪ್ಪಳ ನ್ಯಾಯಾಲಯದಲ್ಲಿ ಹೂಡಿದ 2021 ರ ಅಫಿಡೆವಿಟ್ಅನ್ನು ಮತ್ತೊಮ್ಮೆ 05-09-2024ರಂದು ಸಲ್ಲಿಸಿ 5219.76 ಕೋಟಿ ರೂ. ಮೊತ್ತಕ್ಕೆ ಮನವಿ ಸಲ್ಲಿಸಿರುತ್ತಾರೆ. ಇದೇ ವಿಚಾರಕ್ಕೆ ಕೋರ್ಟ್ ಶೋಕಾಸ್ ನೋಟೀಸ್ ನೀಡಲು ಹಾಗೂ ಪರಿಹಾರ ಮೊತ್ತವನ್ನು ಪಾವತಿಸದ ಕಾರಣ ಸಿವಿಲ್ ಬಂಧನಕ್ಕೆ ಆದೇಶ ನೀಡಿರುತ್ತಾರೆ. ಇದೀಗ ಪ್ರಕರಣ ಸರ್ಕಾರದ ಲೆಕ್ಕಪತ್ರ ಸಮಿತಿ ಎದುರಿಗೆ ಬಂದಿದ್ದು, ಇಡೀ ಪ್ರಕರಣ ನೋಡಿ ಸಮಿತಿ ಸದಸ್ಯರು ದಿಗ್ಭ್ರಮೆಗೊಂಡಿದ್ದಾರೆ.
