ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ನೇಮಕಾತಿ ಕುರಿತು ಮಹತ್ವದ ಅಪ್‌ಡೇಟ್ ನೀಡಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದ ಸಂದರ್ಭ ತಾಂತ್ರಿಕ ಸಮಸ್ಯೆ ಉಂಟಾದ ಕಾರಣ ಅರ್ಜಿ ಸಲ್ಲಿಕೆ ಮಾಡುವ ಅವಧಿ ವಿಸ್ತರಣೆ ಮಾಡುವಂತೆ ಕೋರಿದ್ದರು.
ಈ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ರಮಣದೀಪ್ ಚೌಧರಿ ಮಾಹಿತಿ ನೀಡಿದ್ದಾರೆ. ಅರ್ಜಿ ಸಲ್ಲಿಸುವ ಕಾಲಾವಧಿ ವಿಸ್ತರಣೆ ಮಾಡಲಾಗಿದ್ದು ಉಳಿದಂತೆ ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ದಿನಾಂಕ 20-0-2024ರ ಅಧಿಸೂಚನೆಯಲ್ಲಿ ಕೃಷಿ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ಕೃಷಿ ಅಧಿಕಾರಿ 86 ಮತ್ತು ಸಹಾಯಕ ಕೃಷಿ ಅಧಿಕಾರಿ 586 ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ದಿನಾಂಕವನ್ನು 03-01-2025 ರಿಂದ 01-02-2025 ರವರೆಗೆ ಜಾರಿ ಮಾಡಲಾಗಿತ್ತು.
ಆದರೆ ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಯಾದ ಹಿನ್ನೆಲೆ ಕೆಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕಾಲಾವಧಿಯನ್ನು ವಿಸ್ತರಿಸುವಂತೆ ಕೋರಿಕೊಂಡಿದ್ದರು. ಆದ್ದರಿಂದ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಕೆಯ ಪ್ರಾರಂಭಿಕ ದಿನಾಂಕ ಮತ್ತು ಕೊನೆಯ ದಿನಾಂಕಗಳನ್ನು 05-02-2025 ರಿಂದ 15-02-2025ರವರೆಗೆ ವಿಸ್ತರಿಸಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ವಿದ್ಯಾರ್ಹತೆ, ಮೀಸಲಾತಿ, ಅರ್ಜಿ ಶುಲ್ಕ, ವಯೋಮಿತಿ, ಇತ್ಯಾದಿ ವಿವರಗಳಲ್ಲಿ ಯಾವುದೇ ಬದಲಾವಣೆಗಳು ಇಲ್ಲ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದಿನಾಂಕ 20-09-2024ರ ಅಧಿಸೂಚನೆಯನ್ನು ನೋಡಬಹುದು.
ಇನ್ನೂ ಅರ್ಜಿ ಸಲ್ಲಿಕೆ ಮಾಡಲು ಕನಿಷ್ಠ ವಯೋಮಿತಿ 18 ವರ್ಷಗಳು, ಗರಿಷ್ಠ ವಯೋಮಿತಿ ಸಾಮಾನ್ಯ ಅರ್ಹತೆ 38 ವರ್ಷಗಳು, ಪ್ರವರ್ಗ 2ಎ/ 2ಬಿ/ 3ಎ/ 3ಬಿ 41 ವರ್ಷಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 43 ವರ್ಷಗಳು.
ವಿದ್ಯಾರ್ಹತೆಯ ವಿವರ, ಹೆಚ್ಚಿನ ಮಾಹಿತಿ, ಅಧಿಸೂಚನೆಗಾಗಿ ಅಭ್ಯರ್ಥಿಗಳು https://kpsc.kar.nic.in/ ವೆಬ್‌ಸೈಟ್‌ನಲ್ಲಿ ಅಧಿಸೂಚನೆ ವಿಭಾಗದಲ್ಲಿ ಮೇಲೆ ಕ್ಲಿಕ್ ಮಾಡಿ.