ನವದೆಹಲಿ: ದೆಹಲಿಯ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಬಿಜೆಪಿ ಸರಳ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ.
ಈ ವರೆಗಿನ ಮಾಹಿತಿಯ ಪ್ರಕಾರ ದೆಹಲಿಯಲ್ಲಿ 40 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರೆ ಆಮ್ ಆದ್ಮಿ ಪಕ್ಷ 30 ಸ್ಥಾನಗಳಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ.
ದೆಹಲಿ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರ ಕಳೆದುಕೊಳ್ಳುವುದು ನಿಚ್ಚಳವಾಗಿದ್ದು, ಈ ಬಗ್ಗೆ ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿ ಆಮ್ ಆದ್ಮಿ ಪಕ್ಷ- ಕಾಂಗ್ರೆಸ್ ಪಕ್ಷವನ್ನು ಟ್ರೋಲ್ ಮಾಡಿ ಟೀಕಿಸಿದ್ದಾರೆ.
ಪೌರಾಣಿಕ ಕಥೆಯನ್ನು ಹೊಂದಿರುವ ವಿಡಿಯೋ ತುಣುಕನ್ನು ಹಂಚಿಕೊಂಡಿರುವ ಒಮರ್ ಅಬ್ದುಲ್ಲಾ ನಿಮ್ಮಲ್ಲೇ ನೀವು ಇನ್ನಷ್ಟು ಕಿತ್ತಾಡಿ ಎಂದು ಆಮ್ ಆದ್ಮಿ ಪಕ್ಷ-ಕಾಂಗ್ರೆಸ್ ಪಕ್ಷಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಈಗಾಗಲೇ ಇಂಡಿ ಮೈತ್ರಿಕೂಟ (INDI Alliance)ದಲ್ಲಿ ಬಿರುಕು ಮೂಡಿದೆ. ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಇಂಡಿ ಮೈತ್ರಿಕೂಟದಲ್ಲಿನ ಬಿರುಕನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ದೆಹಲಿ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಯ ಮುನ್ನಡೆಗೆ ಇಂಡಿ ಮೈತ್ರಿಕೂಟದ ಆಂತರಿಕ ಕಲಹವೇ ಕಾರಣ ಎಂದು ಒಮರ್ ಅಬ್ದುಲ್ಲಾ ಈ ವ್ಯಂಗ್ಯಭರಿತ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಎಎಪಿ ಎರಡೂ ದೆಹಲಿ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿದ್ದು ಈ ಫಲಿತಾಂಶಕ್ಕೆ ಕಾರಣ ಎಂಬುದು ಒಮರ್ ಅಬ್ದುಲ್ಲಾ ಮಾತಿನ ಮರ್ಮವಾಗಿದೆ. ಪ್ರತ್ಯೇಕ ಸ್ಪರ್ಧೆ ಪ್ರಚಾರದ ಸಮಯದಲ್ಲಿ ಇಬ್ಬರ ನಡುವೆ ಬಲವಾದ ಪೈಪೋಟಿಗೆ ಕಾರಣವಾಯಿತು. ಇದನ್ನೇ ಉಲ್ಲೇಖಿಸಿರುವ ಅಬ್ದುಲ್ಲಾ, ನಿಮ್ಮಲ್ಲೇ ನೀವು ಇನ್ನಷ್ಟು ಕಿತ್ತಾಡಿ ಒಬ್ಬರನ್ನೊಬ್ಬರು ಮುಗಿಸಿಬಿಡಿ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಏತನ್ಮಧ್ಯೆ, ಹಲವಾರು ಪ್ರಮುಖ ಎಎಪಿ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಆರಂಭಿಕ ಪ್ರವೃತ್ತಿಗಳ ಪ್ರಕಾರ, ಅರವಿಂದ್ ಕೇಜ್ರಿವಾಲ್ ನವದೆಹಲಿಯಲ್ಲಿ, ಅತಿಶಿ ಕಲ್ಕಾಜಿಯಲ್ಲಿ ಮತ್ತು ಅವಧ್ ಓಜಾ ಪತ್ಪರ್ಗಂಜ್‌ನಲ್ಲಿ ಹಿನ್ನಡೆ ಎದುರಿಸಿದ್ದಾರೆ.