ನವದೆಹಲಿ : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 27 ವರ್ಷಗಳ ಬಳಿಕ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಅಭೂತಪೂರ್ವ ಗೆಲುವು ದೊರಕಿಸಿ ಕೊಟ್ಟಿದ್ದಕ್ಕಾಗಿ ದೆಹಲಿ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದಾರೆ. ಇದರೊಂದಿಗೆ ದೆಹಲಿಯ ಬಿಜೆಪಿ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಪ್ರಧಾನಿ ಮೋದಿ, ಜನಶಕ್ತಿಯೇ ಸರ್ವ ಶ್ರೇಷ್ಠ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಭಿವೃದ್ಧಿ ಗೆಲ್ಲುತ್ತದೆ, ಉತ್ತಮ ಆಡಳಿತ ಜಯಗಳಿಸುತ್ತದೆ. ಈ ಅಭೂತಪೂರ್ವ ಮತ್ತು ಐತಿಹಾಸಿಕ ಜನಾದೇಶಕ್ಕಾಗಿ ದೆಹಲಿಯ ನನ್ನ ಪ್ರೀತಿಯ ಸಹೋದರಿಯರು ಮತ್ತು ಸಹೋದರರಿಗೆ ನಾನು ನಮಸ್ಕರಿಸುತ್ತೇನೆ. ಜನಾದೇಶಕ್ಕೆ ನಾವು ವಿನೀತರಾಗಿದ್ದೇವೆ ಮತ್ತು ಗೌರವಿಸುತ್ತೇವೆ ಎಂದು ಪೋಸ್ಟ್ ಮಾಡಿದ್ದಾರೆ.
ದೆಹಲಿಯನ್ನು ಅಭಿವೃದ್ಧಿಪಡಿಸುವ, ಜನರ ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುವ ನಮ್ಮ ಗ್ಯಾರಂಟಿಯಿಂದ, ವಿಕಸಿತ ಭಾರತ ನಿರ್ಮಾಣ ಮಾಡುವಲ್ಲಿ ದೆಹಲಿಯು ಪ್ರಧಾನ ಪಾತ್ರ ವಹಿಸುವಂತಾಗಲಿದೆ. ಈ ಬಗ್ಗೆ ನಾವು ಖಾತರಿ ನಿಡುತ್ತೇವೆ. ಇದುವೇ ನಮ್ಮ ಭರವಸೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಇಂದು ಸಂಜೆ ರಾಷ್ಟ್ರ ರಾಜಧಾನಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಗೆ ಪ್ರಧಾನಿ ಮೋದಿ ಭೇಟಿ ನೀಡಿ 7.30ಕ್ಕೆ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.