ಬೆಂಗಳೂರು: ಗ್ರಾಮೀಣ ಹಾಗೂ ನಗರ ಪ್ರದೇಶಗಳ ಆಸ್ತಿ ನೋಂದಣಿಗೆ ಸರ್ಕಾರ ಇ–ಸ್ವತ್ತು, ಇ–ಖಾತಾ ಕಡ್ಡಾಯಗೊಳಿಸಿದ ನಂತರ ಹಲವು ಸಮಸ್ಯೆಗಳು ಎದುರಾಗಿದ್ದು, ನೋಂದಣಿ ಪ್ರಕ್ರಿಯೆಗೆ ತೊಡಕಾಗಿದೆ. ನಿತ್ಯವೂ ಜನರು ಸ್ಥಳೀಯ ಸಂಸ್ಥೆ ಹಾಗೂ ನೋಂದಣಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಬೆಂಗಳೂರಿನಲ್ಲಿ ಅವಸರದಲ್ಲಿ ಇ-ಖಾತಾ (ಆಸ್ತಿಗಳ ಡಿಜಿಟಲೀಕರಣ) ಯೋಜನೆ ಜಾರಿ ಮಾಡಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸರ್ಕಾರದ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಜನ ಬಿಬಿಎಂಪಿಯ ಕಾರ್ಯ ವೈಖರಿಗೆ ಕೆಂಡಾಮಂಡಲರಾಗಿದ್ದಾರೆ. ಇ-ಖಾತಾ ಮಾಡಿಸಿದರೆ ಡಿಜಿಟಲ್ ರೂಪದಲ್ಲಿ ನಿಮ್ಮ ಆಸ್ತಿಗಳ ವಿವರ ಲಭ್ಯವಿರಲಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ಆಸ್ತಿಗಳನ್ನು ಸಹ ಪೂರ್ಣ ಡಿಜಿಟಲೀಕರಣ ಮಾಡದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ಜನ ಇದರಿಂದ ಪರದಾಡುತ್ತಿದ್ದಾರೆ. ಆಸ್ತಿದಾರರಿಗೆ ಬಿಬಿಎಂಪಿಯು ಹೊಸ ತಲೆ ನೋವು ತಂದಿದೆ ಅದರ ವಿವರ ಇಲ್ಲಿದೆ. ಬಿಬಿಎಂಪಿಯು ಇ ಖಾತಾ ವಿಚಾರದಲ್ಲಿ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ಆಸ್ತಿದಾರರ ಆಸ್ತಿ ಸಂರಕ್ಷಣೆ ಹಾಗೂ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದವರನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರಿಸುವ ಉದ್ದೇಶದಿಂದ ಇ – ಖಾತಾ ಜಾರಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಬರೋಬ್ಬರಿ 21 ಲಕ್ಷಕ್ಕೂ ಹೆಚ್ಚು ಆಸ್ತಿಗಳು ಅಧಿಕೃತವಾಗಿ ನೋಂದಣಿಯಾಗಿವೆ. ಆದರೆ ಐದರಿಂದ ಆರು ಲಕ್ಷ ಆಸ್ತಿಗಳು ಇನ್ನೂ ರಿಜಿಸ್ಟ್ರೇಷನ್ ಆಗಿಲ್ಲ. ಆದರೆ, ಅಂತಿಮ ಇ – ಖಾತಾ ಪಡೆದಿರುವ ಆಸ್ತಿಗಳ ಪ್ರಮಾಣ ಕೇವಲ ಶೇ 10ಕ್ಕೂ ಕಡಿಮೆ ಇದೆ ಎಂದು ವರದಿಯಾಗಿದೆ.
