ದಾವಣಗೆರೆ: ರೋಗಿಯ ಘನತೆಯಿಂದ ಸಾಯುವ ಹಕ್ಕಿಗಾಗಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ದಾವಣಗೆರೆಯ 85 ವರ್ಷದ ನಿವೃತ್ತ ಶಿಕ್ಷಕಿ ಹೆಚ್ ಬಿ ಕರಿಬಸಮ್ಮ ಈ ಯೋಜನೆಯ ಮೊದಲ ಫಲಾನುಭವಿಯಾಗುವ ಸಾಧ್ಯತೆ ಇದೆ.
ಚಿಕಿತ್ಸೆಯ ಸಂದರ್ಭದಲ್ಲಿ ಚೇತರಿಕೆ ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದರೆ ಆ ಸ್ಥಿತಿಯಲ್ಲಿ ಬದುಕಲು ಇಷ್ಟ ಇಲ್ಲದವರು ತಾವು ಚಿಕಿತ್ಸೆಗೆ ಒಳಪಡುವ ಮೊದಲೇ ಈ ರೀತಿಯ ಉಯಿಲು ಬರೆಯಬಹುದು. ಇಂತಹ ಉಯಿಲು ಇದ್ದರೆ ಅದನ್ನು ಜಾರಿಮಾಡುವುದು ವೈದ್ಯರು ಹಾಗೂ ಬಂಧುಗಳ ಕರ್ತವ್ಯವಾಗುತ್ತದೆ ಎಂದು ಇತ್ತೀಚೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು. 3 ದಶಕಗಳಿಂದ ಸ್ಲಿಪ್ ಡಿಸ್ಕ್ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಕರಿಬಸಮ್ಮ ಅವರಿಗೆ ಇತ್ತೀಚೆಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಘನತೆಯಿಂದ ಸಾಯುವ ಹಕ್ಕು ಪಡೆಯಲು 24 ವರ್ಷಗಳಿಂದ ಪ್ರಧಾನಿ, ರಾಷ್ಟ್ರಪತಿ, ಸುಪ್ರೀಂ ಕೋರ್ಟ್, ರಾಷ್ಟ್ರಪತಿಗಳಿಗೆ ಪತ್ರ ಬರೆಯುತ್ತಿದ್ದರು.
ದಯಾಮರಣವನ್ನು 2018 ರಲ್ಲೇ ಸುಪ್ರೀಂ ಕೋರ್ಟ್ ಕಾನೂನುಬದ್ಧಗೊಳಿಸಿತ್ತು ಆದರೂ ಕರ್ನಾಟಕ ಸರ್ಕಾರ ಮಾತ್ರ ಇದನ್ನು ಜಾರಿಗೊಳಿಸಲು ಮುಂದಾಗಿದೆ.
ರಾಜ್ಯ ಸರ್ಕಾರ ದಯಾಮರಣವನ್ನು ಜಾರಿಗೆ ತರಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ಕರಿಬಸಮ್ಮ, ಹಲವರು ಈ ಹಕ್ಕು ಪಡೆಯಲು ಕಾಯುತ್ತಿದ್ದಾರೆ. ಆದರೆ ಈ ಪೈಕಿ ನಾನು ಮೊದಲ ವ್ಯಕ್ತಿಯಾಗಿರುತ್ತೇನೆ ಎಂದು ಭಾವಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಪತಿಯ ಜೊತೆಯಲ್ಲಿ ವಾಸಿಸುತ್ತಿರುವ ಕರಿಬಸಮ್ಮ, ತಮ್ಮ ಅನಾರೋಗ್ಯದ ಕಾರಣದಿಂದಾಗಿ ಆಸ್ತಿ, ಹಣ, ಸಂಬಂಧಗಳನ್ನು ಕಳೆದುಕೊಂಡಿದ್ದಾರೆ. 20 ವರ್ಷಗಳಿಂದ ಕೇರ್ ಹೋಮ್ ನಲ್ಲಿರುವ ಅವರು ತಮ್ಮ ಎಲ್ಲಾ ಆಸ್ತಿಯನ್ನು ಕೊನೆಯದಾಗಿ ಉಳಿಸಿಕೊಂಡಿದ್ದ 6 ಲಕ್ಷ ರೂಪಾಯಿಗಳನ್ನೂ ಬಿಎಸ್ಎಫ್ ನ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿಗೆ ದಾನ ನೀಡಿದ್ದಾರೆ.ಸಂಬಂಧಿಕರಿಂದಲೂ ದೂರವಾಗಿರುವ ಕರಿಬಸಮ್ಮ ಅವರು ಈಗ ದಯಾಮರಣಕ್ಕಾಗಿ ಎದುರು ನೋಡುತ್ತಿದ್ದಾರೆ.