ಮಂಗಳೂರು: ನಗರದ ಕಾರ್‌ಸ್ಟ್ರೀಟ್‌ನಲ್ಲಿರುವ ಮೂರು ಅಡಿಕೆ ಸುಪಾರಿ ಕಂಪನಿಗಳ ಮೇಲೆ ಐಟಿ ದಾಳಿ ನಡೆದಿದ್ದು, ಕೋಟ್ಯಂತರ ಮೌಲ್ಯದ ನಗದು ಮತ್ತು ಚಿನ್ನಾಭರಣಗಳು ಪತ್ತೆಯಾಗಿದೆ.
ನಗರದ ಕಾರ್‌ಸ್ಟ್ರೀಟ್ ಬಳಿ ಕಾರ್ಯಾಚರಿಸುತ್ತಿರುವ ಸ್ವಸ್ತಿಕ್ ಟ್ರೇಡಿಂಗ್ ಕಂಪನಿ, ನರೇಶ್ ಆ್ಯಂಡ್ ಕಂಪನಿ, ಶಿವ್ ಪ್ರೇಮ್ ಟ್ರೇಡರ್ಸ್, ಪರಮೇಶ್ವರ್ ಟ್ರೇಡಿಂಗ್ ಕಂಪನಿಯ ಶಾಪ್‌ಗಳಿಗೆ ಐಟಿ ದಾಳಿ ನಡೆದಿದೆ.
ಈ ಕಂಪನಿಯು ಅಡಿಕೆ ಸುಪಾರಿ, ಗುಟ್ಕಾ ಪಾನ್ ಮಸಾಲ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ತರ ಭಾರತಕ್ಕೆ ಪೂರೈಕೆ ಮಾಡುತ್ತಿತ್ತು. ಬಿಹಾರ, ಉತ್ತರಪ್ರದೇಶ, ದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಇವರ ಮಾರುಕಟ್ಟೆ ಹರಡಿಕೊಂಡಿತ್ತು. ಈ ಕಂಪೆನಿಯು ಸಾವಿರಾರು ಕೋಟಿ ವಹಿವಾಟು ನಡೆಸುತ್ತಿತ್ತು ಎನ್ನಲಾಗಿದೆ. ಆದರೆ ಈ ಕಂಪನಿಗಳ ಮಾಲೀಕರು ತೆರಿಗೆ ತಪ್ಪಿಸಲು ಅನಧಿಕೃತವಾಗಿ ಮಾರಾಟ, ವಹಿವಾಟು ನಡೆಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಮಂಗಳೂರಿನ ಐಟಿ ಇಲಾಖೆಯ ಅಧಿಕಾರಿಗಳು ಕಂಪನಿ ಕಚೇರಿಗಳು ಮತ್ತು ಮಾಲಕರ ಮನೆಗಳಿಗೂ ದಾಳಿ ನಡೆಸಿದ್ದಾರೆ. ಸ್ವಸ್ತಿಕ್ ಟ್ರೇಡಿಂಗ್ ಕಂಪನಿ, ಪರಮೇಶ್ವರಿ ಟ್ರೇಡಿಂಗ್ ಕಂಪನಿ ಮತ್ತು ನರೇಶ್ ಆ್ಯಂಡ್ ಕಂಪನಿಯ ಮಾಲಕ ಸತ್ಯೇಂದ್ರ ಶರ್ಮಾ ಮತ್ತು ಶಿವಕುಮಾರ್ ಶರ್ಮಾ ಮನೆಗಳಲ್ಲಿ ಅನಧಿಕೃತವಾಗಿ ಕೂಡಿಟ್ಟಿರುವ ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದೆ.
ಒಟ್ಟು ಎಷ್ಟು ಕೋಟಿ ಮೌಲ್ಯದ ಚಿನ್ನ ಮತ್ತು ನಗದು ಸಿಕ್ಕಿದೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ. ಅಧಿಕಾರಿಗಳ ಪರಿಶೀಲನೆ ಮುಂದುವರಿದಿದೆ.