ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಫೆಬ್ರವರಿ 16 ರ ಭಾನುವಾರದಂದು ಪಶ್ಚಿಮ ಬಂಗಾಳದ ಬುರ್ದ್ವಾನ್‌ನಲ್ಲಿ ರ್ಯಾಲಿ ನಡೆಸಲು ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಉದ್ದೇಶಿಸಿ ಮಾತನಾಡಲಿರುವ ಈ ರ್ಯಾಲಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನಿರಾಕರಿಸಿತ್ತು.
ಸರ್ಕಾರ ಅನುಮತಿ ನಿರಾಕರಿಸಿದ ನಂತರ ಆರ್‌ಎಸ್‌ಎಸ್, ಅನುಮತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯದಲ್ಲಿ ಪರೀಕ್ಷೆಗಳು ನಡೆಯುತ್ತಿರುವುದರಿಂದ “ಶಬ್ದವನ್ನು ಕಡಿಮೆ ಇಡಬೇಕು” ಎಂಬ ಷರತ್ತಿನೊಂದಿಗೆ ಅನುಮತಿ ನೀಡಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರ(SAI) ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲು ಅಥವಾ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ನಿರಾಕರಿಸಿದ್ದರಿಂದ ಹೈಕೋರ್ಟ್‌ನ ಈ ತೀರ್ಪು ರಾಜ್ಯ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ.ತೃಣಮೂಲ ಕಾಂಗ್ರೆಸ್(TMC) ಸರ್ಕಾರವು ರಾಜ್ಯದಲ್ಲಿ ನಡೆಯುತ್ತಿರುವ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಉಲ್ಲೇಖಿಸಿ ಆರ್ ಎಸ್ಎಸ್ ರ್ಯಾಲಿಗೆ ಅನುಮತಿ ನಿರಾಕರಿಸಿತ್ತು.
ರ್ಯಾಲಿ ನಡೆಯುವ ಸ್ಥಳಕ್ಕೆ ಹತ್ತಿರದಲ್ಲಿ ಯಾವುದೇ ಶಾಲೆಗಳಿಲ್ಲ ಎಂದು ಅರ್ಜಿದಾರರು ವಾದಿಸಿದರು. ಅಲ್ಲದೆ ಈ ಕಾರ್ಯಕ್ರಮವು ಭಾನುವಾರದಂದು ನಡೆಯುತ್ತದೆ ಮತ್ತು ಕಡಿಮೆ ಸಮಯ ಇರುತ್ತದೆ ಎಂಬ ಕಾರಣಕ್ಕೆ ನ್ಯಾಯಾಲಯ ಅನುಮತಿ ನೀಡಿದೆ.