ಲಖನೌ: ಕೇಳಿದಷ್ಟು ವರದಕ್ಷಿಣೆ ತರಲಿಲ್ಲವೆಂದು ಅತ್ತೆ-ಮಾವ ಸೇರಿಕೊಂಡು ಸೊಸೆಗೆ ಎಚ್ಐವಿ (HIV) ಸೋಂಕಿತ ಸೂಜಿ ಚುಚ್ಚಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ.
ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತೆಯ ಪತಿ, ಅತ್ತೆ, ಮಾವ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಪೊಲೀಸರು ಬಿಎನ್ಎಸ್ಎಸ್: 307, 498ಎ, 323, 328, 406 ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಉತ್ತರಾಖಂಡದ ಹರಿದ್ವಾರದ ನಿವಾಸಿ ಅಭಿಷೇಕ್ ಸೈನಿ ಎಂಬಾತನಿಗೆ ಸೋನಲ್ನೊಂದಿಗೆ 2023ರ ಫೆಬ್ರವರಿ 15ರಂದು ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ವಿವಾಹದ ಸಮಯದಲ್ಲಿ 15 ಲಕ್ಷ ರೂ. ಹಣ ಹಾಗೂ ಸಬ್-ಕಾಂಪ್ಯಾಕ್ಟ್ ಎಸ್ಯುವಿಯನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೆ, ಮದುವೆಯಾದ ಕೆಲ ತಿಂಗಳ ಬಳಿಕ ವರದಕ್ಷಿಣೆ ವಿಚಾರವಾಗಿ ಪತಿಯ ಮನೆಯವರು ಖ್ಯಾತೆ ತೆಗೆದಿದ್ದು, ಹೆಚ್ಚುವರಿ 10 ಲಕ್ಷ ರೂ. ಹಣ ಹಾಗೂ ಸ್ಕಾರ್ಪಿಯೋ ಕಾರನ್ನು ಕೊಡುವಂತೆ ಬೇಡಿಕೆ ಇರಿಸಿದ್ದಾರೆ.
ಪತಿಯ ಮನೆಯವರ ಬೇಡಿಕೆಯನ್ನು ಹುಡುಗಿ ಕಡೆಯವರು ನಿರಾಕರಿಸಿದಾಗ ಅತ್ತೆ-ಮಾವ ಕಿರುಕುಳ ನೀಡಲು ಆರಂಭಿಸಿದ್ದರು. ಪುತ್ರಿಯನ್ನು ಅವಮಾನಿಸಿದರು, ಪುತ್ರನಿಗೆ ಬೇರೆ ಮದುವೆ ಮಾಡುವುದಾಗಿ ಹೇಳಿ ಮಾರ್ಚ್ 25, 2023ರಂದು ಮನೆಯಿಂದ ಹೊರಹಾಕಿದರು. ಬಳಿಕ ಎರಡೂ ಕುಟುಂಬಸ್ಥರು ಮಾತನಾಡಿ ಆಕೆಯನ್ನು ಮತ್ತೆ ಪತಿಯ ಮನೆಗೆ ಕಳುಹಿಸಲಾಗಿತ್ತು. ಸ್ವಲ್ಪದಿನ ಸುಮ್ಮನಿದ್ದ ಗಂಡನ ಮೆನೆಯವರು ಮತ್ತೆ ವರದಕ್ಷಿಣೆಗಾಗಿ ಪೀಡಿಸಲು ಶುರು ಮಾಡಿದ್ದು, ತವರು ಮನೆಯಲ್ಲಿ ಹಣ ಕೇಳಲು ನಿರಾಕರಿಸಿದಾಗ ಆಕೆಗೆ ಎಚ್ಐವಿ (HIV) ಸೋಂಕಿತ ಸೂಜಿ ಚುಚ್ಚಿದ್ದಾರೆ.
ಮೊದಲಿಗೆ ಈ ಬಗ್ಗೆ ದೂರು ದಾಖಲಿಸಲು ಪೊಲೀಸರು ಹಿಂದೇಟು ಹಾಕಿದರು. ಬಳಿಕ ಸಂತ್ರಸ್ತೆಯ ಪೋಷಕರು ಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ನಿರ್ದೇಶನದನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪ್ರಕರಣ ವಿಚಾರಣೆ ಹಂತದಲ್ಲಿದ್ದು ಮತ್ತಷ್ಟು ವಿಚಾರವನ್ನು ಮುಂದಿನ ದಿನಗಳಲ್ಲಿ ಹೊರಬೀಳಲಿದೆ.