ತಿರುವನಂತಪುರಂ: ಕೇಂದ್ರ ಅಬಕಾರಿ ಮತ್ತು ಜಿಎಸ್‌ಟಿ ಇಲಾಖೆಯ ಹೆಚ್ಚುವರಿ ಆಯುಕ್ತ, ಅವರ ತಾಯಿ ಹಾಗೂ ಸಹೋದರಿ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾದ ಘಟನೆ ಕೇರಳದಲ್ಲಿ ವರದಿಯಾಗಿದೆ.
ಮನೀಶ್ ವಿಜಯ್ ಮೃತ ಅಧಿಕಾರಿ. ಮೂಲತಃ ಜಾರ್ಖಂಡ್ ಮೂಲದ ಮನೀಶ್ ವಿಜಯ್ ಕುಟುಂಬ ಕೇರಳದ ಎರ್ನಾಕುಲಂ ಜಿಲ್ಲೆಯ ಕಕ್ಕನಾಡ್ ಕಸ್ಟಮ್ಸ್ ಕ್ವಾಟ್ರಸ್‌ನಲ್ಲಿ ವಾಸವಾಗಿದ್ದರು. ಮನೀಶ್ ವೈಯಕ್ತಿಕ ಕಾರಣಕ್ಕೆ 4 ದಿನಗಳ ಕಾಲ ರಜೆ ತೆಗೆದುಕೊಂಡಿದ್ದರು. ಆದರೆ 4 ದಿನ ಕಳೆದರೂ ಮನೀಶ್ ಕರ್ತವ್ಯಕ್ಕೆ ಮರಳದ ಹಿನ್ನೆಲೆ ಸಹೋದ್ಯಗಿಗಳು ಅವರ ಮನೆಗೆ ತೆರಳಿದ್ದಾರೆ. ಈ ವೇಳೆ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಹೀಗಾಗಿ ಕೂಡಲೇ ಸಹೋದ್ಯೋಗಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಬಂದು ಬಾಗಿಲು ತೆರೆದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮನೀಶ್ ಮತ್ತು ಅವರ ಸಹೋದರಿ ಶಾಲಿನಿ ಪ್ರತ್ಯೇಕ ಕೊಠಡಿಗಳಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ತಾಯಿ ಶಕುಂತಲಾ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ತಾಯಿಯನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಹೂವುಗಳಿಂದ ಮುಚ್ಚಲಾಗಿತ್ತು. ಈ ಹಿನ್ನೆಲೆ ತಾಯಿಯನ್ನು ಕೊಂದು ಮಕ್ಕಳಿಬ್ಬರು ನೇಣಿಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.