ಬೆಳಗಾವಿ: ಮೂರು ತಿಂಗಳಿಂದ ಗೃಹಲಕ್ಷ್ಮಿ ಹಣ ಖಾತೆಗೆ ಜಮೆ ಆಗಿಲ್ಲ ಎಂದು ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಬಂದು ಎರಡು ವರ್ಷ ಆಯ್ತು. ಭಂಡತದನದಿಂದ ಐದು ಗ್ಯಾರಂಟಿ ಕೊಡುತ್ತೇವೆ ಎಂದಿದ್ದರು. ಆದರೆ ಈಗ ಗ್ಯಾರಂಟಿ ಹಣವನ್ನೂ ಕೊಡ್ತಿಲ್ಲ. ಇವತ್ತೇ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ ಕೇವಲ 20 ಸೀಟು ಬರುತ್ತದೆ ಎಂದು ಹೇಳಿದ್ದಾರೆ.
ಯಾವ ಗ್ಯಾರಂಟಿಯೂ ಸ್ಮಾರ್ಟ್ ಇಲ್ಲ, ಬೋಗಸ್ ಹೇಳಿ ವೋಟ್ ಹಾಕಿಸಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಜನರಿಗೆ ಮೋಸ ಮಾಡುತ್ತಿದ್ದಾರೆ. ಕಳೆದ ಬಾರಿ ಬಜೆಟ್ ಮಂಡನೆ ಮಾಡಿದ್ದರ ಪೈಕಿ ಒಂದೂವರೆ ಲಕ್ಷ ಕೋಟಿ ಹಣ ಬಾಕಿ ಇದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ ಎಂದರು.
ರಾಜ್ಯದಲ್ಲಿ ದಿನನಿತ್ಯ ಕೊಲೆ ಸುಲಿಗೆ ನಡೆಯುತ್ತಿವೆ. ಬೇರೆ ರಾಜ್ಯದವರು ಬಂದು ಕಳ್ಳತನ ಮಾಡ್ತಿದ್ದಾರೆ. ಜನರಿಗೆ, ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲ. ಪುಂಡರ ಹಾವಳಿ ಜಾಸ್ತಿ ಆಗಿದೆ. ಸರ್ಕಾರದ ಹಿಡಿತ ತಪ್ಪಿ ಹೋಗಿದ್ದು, ಸಿದ್ದರಾಮಯ್ಯ ಎಲ್ಲದರಲ್ಲೂ ವಿಫಲರಾಗಿದ್ದಾರೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಅತಿ ಹೆಚ್ಚು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನುಡಿದಂತೆ ನಡೆದಿದ್ದೇವೆ ಎಂದಿದ್ದಾರೆ. ಇದೇನಾ ಇವರು ನುಡಿದಂತೆ ನಡೆದಿದ್ದು? ನಾಡಿನ ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಕಾಳಜಿಯಿಲ್ಲ. ಅಭಿವೃದ್ಧಿ ಸಂಪೂರ್ಣವಾಗಿ ಶೂನ್ಯವಾಗಿದೆ. ನಾಡಿನ ಜನ ಸಂಕಷ್ಟದಲ್ಲಿದ್ದು, ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೂಡಲೇ ಇವರು ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಬೇಕು ಎಂದು ಕಿಡಿಕಾರಿದರು.